Saturday, January 11, 2025

ಹಾಸನದಲ್ಲಿ ಹಾಡಹಗಲೇ ಮಹಿಳೆಯ ಹತ್ಯೆ

ಹಾಸನ: ಗಂಡ ಹೆಂಡತಿ ಇಬ್ಬರು ಮುದ್ದಾದ ಮಕ್ಕಳ ಸುಂದರ ಸಂಸಾರ. ಗಂಡ ಜ್ಯುವೆಲರಿ ಮಾಲೀಕರಾದ್ರೆ, ಮಡದಿ ಮಕ್ಕಳನ್ನು ಶಾಲೆಗೆ ಕಳಿಸಿ ಮನೆಯಲ್ಲಿ ಮಧ್ಯಾಹ್ನದ ಅಡುಗೆ ಮಾಡಿ ಪತಿಗಾಗಿ ಕಾದು ಕುಳಿತಿದ್ದರು, ಮಾಮೂಲಿಯಾಗಿ ಮನೆಗೆ ಬಂದ ಗಂಡ ಮನೆ ಬಾಗಿಲು ತೆರೆದಾಗ ಕಂಡಿದ್ದು ಘೋರಾತಿ ಘೋರ ದೃಶ್ಯ. ಇಷ್ಟಕ್ಕೂ ಅಲ್ಲಿ ಆಗಿದ್ದೇನು..?

ಹಾಸನ ನಗರದ ಲಕ್ಷ್ಮೀಪುರ ಬಡಾವಣೆಯ ಮೂರನೇ ಕ್ರಾಸ್‌ನಲ್ಲಿ ಹಾಡಹಗಲೇ ಮನೆಯಲ್ಲಿದ್ದ ಒಂಟಿ ಮಹಿಳೆಯ ಭೀಕರ ಹತ್ಯೆ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಹಂತಕರು ಮಹಿಳೆಯ ಕುತ್ತಿಗೆ ಹಿಸುಕಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾರೆ. 44 ವರ್ಷದ ಮಂಜುಳಾ ಮೃತ ದುರ್ದೈವಿ. 20 ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಜುಳಾ, ಕುಮಾರ್ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರು. ಮಕ್ಕಳಿಬ್ಬರೂ ಕಾಲೇಜಿಗೆ ಹೋದರೆ, ಪತಿ ತಮ್ಮ ಜುವೆಲರಿ ಶಾಪ್‌ಗೆ ಹೋಗಿದ್ದರು. ಬಳಿಕ ಎಂದಿನಂತೆ ಮದ್ಯಾಹ್ನ 2 ಗಂಟೆ ವೇಳೆಗೆ ಕುಮಾರ್‌ ಮನೆಗೆ ಊಟಕ್ಕೆ ಬಂದಾಗ ಶಾಕ್ ಆಗಿದ್ದಾರೆ.

ಹಾಸನದ ಗಾಂಧಿ ಬಜಾರ್‌ನಲ್ಲಿ ಚಿನ್ನ ಬೆಳ್ಳಿ ಶಾಪ್ ಹೊಂದಿರೋ ಕುಮಾರ್ ಎರಡು ವರ್ಷಗಳ ಹಿಂದಷ್ಟೇ ಹೊಸ ಮನೆ ಕಟ್ಟಿಸಿದ್ದರು. ಒಳ್ಳೆ ವ್ಯವಹಾರ ಮುದ್ದಾದ ಮಕ್ಕಳು ಮಡದಿ ಸಂಸಾರ ಎಲ್ಲವೂ ಚೆನ್ನಾಗಿತ್ತು. ಹೀಗಿದ್ದಾಗ ಶುಕ್ರವಾರ ಮಧ್ಯಾಹ್ನ ಇಬ್ಬರು ಹೆಲ್ಮೆಟ್ ಧಾರಿ ಯುವಕರು ಮನೆ ಬಳಿ ನಿಂತಿದ್ದಾರೆ. ಗೊತ್ತಿರುವವರೇ ಇರಬೇಕೆಂದು ಇದೇ ಮನೆಯಲ್ಲಿ ಬಾಡಿಗೆಗಿದ್ದ ಯುವಕನೊಬ್ಬ ನೋಡಿ ಮನೆಯೊಳಗೆ ಹೋಗಿದ್ದಾನೆ. ಇದಾಗಿ ಕೆಲವೇ ನಿಮಿಷಗಳ ಅಂತರದಲ್ಲಿ ಕೊಲೆ ನಡೆದಿರೋದು ಗೊತ್ತಾಗಿದೆ. ಕೂಡಲ ಸ್ಥಳೀಯರು ಕೂಡಲೇ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ.

ಒಟ್ನಲ್ಲಿ ಸುಂದರ ಸಂಸಾರದಲ್ಲಿ ಹಂತಕರು ಬಿರುಗಾಳಿ ಎಬ್ಬಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಬಂದನದ ಬಳಿಕ ಕೊಲೆ ಹಿಂದಿನ ರಹಸ್ಯ ಬಯಲಾಗಲಿದೆ.

ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ

RELATED ARTICLES

Related Articles

TRENDING ARTICLES