ಶಿವಮೊಗ್ಗ: ಕಾರ್ಯಕರ್ತರಿಗೆ ಮೆಚ್ಯುರಿಟಿ ಇಲ್ಲ ಎಂಬ ಹೇಳಿಕೆ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಗೆ ಬಿಗಿ ಭದ್ರತೆ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಅಪಪ್ರಚಾರ ಆಗುತ್ತಿದೆ. ಬಿಜೆಪಿಯಲ್ಲಿ ಕೆಲ ಯುವ ಮೋರ್ಚಾದ ಕಾರ್ಯಕರ್ತರಿಗೆ ಮೆಚ್ಯುರಿಟಿ ಕಡಿಮೆ, ಹೀಗಾಗಿ ರಾಜೀನಾಮೆ ಕೊಡುತ್ತಿದ್ದಾರೆ. ರಾಜೀನಾಮೆ ಕೊಡುವುದು ಹೇಡಿಗಳ ಲಕ್ಷಣ, ಒಬ್ಬರು ರಾಜೀನಾಮೆ ಕೊಟ್ಟರೆ, ಬೇರೊಬ್ಬರು ಪಕ್ಷ ಸೇರುತ್ತಾರೆ ಎಂದು ನಿನ್ನೆ (ಶುಕ್ರವಾರ ) ಹೇಳಿದ್ದರು. ಅಲ್ಲದೇ ಈ ಹೇಳಿಕೆಗೆ ಬಿಜೆಪಿ ಪಾಳಯದಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.
ಈ ಹೇಳಿಕೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಬಹುದು ಎಂದು ಮುನ್ನೆಚ್ಚರಿಕೆಯಾಗಿ ಶಿವಮೊಗ್ಗದ ಗುಂಡಪ್ಪ ಶೆಡ್ನಲ್ಲಿ ಇರುವ ಮನೆಗೆ 30 ಕ್ಕೂ ಹೆಚ್ಚು ಪೊಲೀಸರ ಸಿಬ್ಬಂದಿ ನಿಯೋಜನೆ ಮಾಡಿದ್ದು, ಗುಂಡಪ್ಪ ಶೆಡ್ನ ರೈಲ್ವೆ ಗೇಟ್ ಬಳಿಯಲ್ಲೇ ಕಾರ್ಯಕರ್ತರನ್ನು ತಡೆಯಲು ಕ್ರಮ ಜರುಗಿಸಲಾಗಿದೆ.
ಇನ್ನು ಇಂದು ಬೆಂಗಳೂರಿನ ಜಯಮಹಲ್ನಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಹಾಕಲಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ಮನೆಗೂ ಬಿಗಿ ಭದ್ರತೆ ಕೊಡಲಾಗಿದೆ.