ರಾಜಸ್ಧಾನ : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯನ್ನು ರಾಜಾಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಾಜಾಸ್ಥಾನದ ಉದಯಪುರದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ಹೇಳಿಕೆಯನ್ನು ಬೆಂಬಲಿಸಿ ಟೈಲರ್ ಕನ್ಹಯ್ಯ ಎಂಬ ವ್ಯಕ್ತಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದನ್ನು ಖಂಡಿಸಿ ಮುಸ್ಲಿಂ ಮೂಲಭೂತವಾದಿಗಳು ಟೈಲರ್ ಕನ್ಹಯ್ಯ ಲಾಲ್ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಹತ್ಯೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳಿಂದಲೂ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ಹತ್ಯೆ ಖಂಡಿಸಿ, ರಾಜಾಸ್ಥಾನದ ಮುಖ್ಯಮಂತ್ರಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. 48 ಗಂಟೆಗಳ ನಂತರವೂ ಆರೋಪಿಗಳನ್ನು ಇನ್ನೂ ಕಂಬಿಯ ಹಿಂದೆ ಇರಿಸಿಲ್ಲ. ಆದರೆ ಉದಯಪುರದಲ್ಲಿ ಘಟನೆ ನಡೆದಾಗ ರಾಜಸ್ಥಾನ ಪೊಲೀಸರು ಆರೋಪಿಯನ್ನು 4 ಗಂಟೆಯೊಳಗೆ ಬಂಧಿಸಿದ್ದರು. ಅಲ್ಲದೇ, ದುಃಖದ ಸಮಯದಲ್ಲಿ ಅವರ ಕುಟುಂಬವನ್ನು ಬೆಂಬಲಿಸಲು ನಮ್ಮ ಸರ್ಕಾರವು ಕನ್ಹಯ್ಯಾ ಲಾಲ್ ಜಿ ಅವರ ಇಬ್ಬರು ಪುತ್ರರಿಗೂ 50 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಿದೆ. ಕರ್ನಾಟಕ ಸರ್ಕಾರವೂ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.