ಬೆಂಗಳೂರು: ಶಿವರಾಜ್ ಕುಮಾರ್ ದಂಪತಿಗೆ ಶಕ್ತಿಧಾಮ ಮಕ್ಕಳ ಮೇಲೆ ಅಪಾರ ಪ್ರೀತಿ ಇದೆ. ಸಮಯ ಸಿಕ್ಕಾಗ ಅವರು ಮೈಸೂರಿಗೆ ತೆರಳಿ ಶಕ್ತಿಧಾಮದ ಮಕ್ಕಳನ್ನು ಭೇಟಿ ಮಾಡ್ತಾನೇ ಇರ್ತಾರೆ. ಆದ್ರೆ ಇಂದು ಶಿವರಾಜ್ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆ ತಂದಿದ್ರು. ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫ್ಲವರ್ ಶೋ ಸಿದ್ಧತೆ ಕೂಡ ಪರಿಶೀಲಿಸಿದ್ರು.
ಪ್ರತಿ ವರ್ಷ ಆಗಸ್ಟ್ ತಿಂಗಳು ಬಂತು ಅಂದ್ರೆ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಹೂವಿನ ಲೋಕ ಮೇಳೈಸುತ್ತೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ವಾತಂತ್ರೋತ್ಸವಕ್ಕೆ ಫಲಪುಷ್ಪ ಪ್ರದರ್ಶನ ನಡೆದಿರಲಿಲ್ಲ. ಆದ್ರೆ ಈ ಬಾರಿ ಮತ್ತೆ ಲಾಲ್ ಬಾಗ್ ನಲ್ಲಿ ಹೂವಿನ ಲೋಕ ಅನಾವರಣಗೊಳ್ಳಲಿದೆ. ಈಗಾಗಲೇ ಸಿದ್ಧತೆ ಆರಂಭ ಆಗಿದ್ದು ಇವತ್ತು ಲಾಲ್ಬಾಗ್ಗೆ ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಶಕ್ತಿ ಧಾಮದ ಮಕ್ಕಳೊಂದಿಗೆ ವಿಸಿಟ್ ಕೊಟ್ರು. ಫಲ ಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ಪಡೆದು ಗಾಜಿನ ಮನೆಯ ತಯಾರಿಯನ್ನು ವೀಕ್ಷಿಸಿದ್ರು.
ರಾಜಕುಮಾರ್ ಅವರ ಬೇಡರ ಕಣ್ಣಪ್ಪ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಇನ್ನು ಕೆಲವು ಸಿನಿಮಾದಲ್ಲಿ ರಾಜಕುಮಾರ್ ಅವರು ಕೊಟ್ಟ ಸಂದೇಶವನ್ನು ಫಲ ಪುಷ್ಪ ಪ್ರದರ್ಶನದಲ್ಲಿ ಬಿಂಬಿಸಲಾಗುತ್ತೆ. ಅಷ್ಟೇ ಅಲ್ಲ ಸಸ್ಯಕಾಶಿಯಲ್ಲಿ ಗಾಜನೂರಿನಲ್ಲಿ ಡಾ.ರಾಜ್ ಕುಮಾರ್ ಅವರ ಹುಟ್ಟಿದ ಮನೆಯ ಮಾದರಿಯನ್ನು ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಗಾಜನೂರು ಮನೆಯ ಅಂಗಳದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಅನಾವರಣಗೊಳ್ಳಲಿದೆ.
ಶಕ್ತಿಧಾಮದ ಮಕ್ಕಳನ್ನ ಎರಡು ಬೆಂಗಳೂರಿನ ಪ್ರವಾಸಕ್ಕೆ ಕರೆತರಲಾಗಿದೆ. ಲಾಲ್ಬಾಗ್ನಲ್ಲಿ ತಯಾರಿ ವೀಕ್ಷಿಸಿದ ಬಳಿಕ ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಮಾತನಾಡಿದ್ರು. ಗೀತಾ ಶಿವರಾಜ್ ಕುಮಾರ್ ಕೂಡ ಹೆತ್ತ ತಾಯಿಯಂತೆ ಮಕ್ಕಳ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ್ರು.
ಒಟ್ಟಾರೆ ಫಲ ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಹೂಗಳ ಮೂಲಕ ಮತ್ತೆ ಜೀವ ಪಡೆಯಲಿದ್ದಾರೆ. ಇದಕ್ಕೆ ತೋಟಗಾರಿಕೆ ಇಲಾಖೆ ಕೂಡ ಎಲ್ಲಾ ತಯಾರಿಗಳನ್ನು ನಡೆಸಿದೆ. ಸಂಚಾರ ಸುವ್ಯವಸ್ಥೆಗಾಗಿ ನಮ್ಮ ಮೆಟ್ರೋದೊಂದಿಗೆ ಈಗಾಗಲೇ ಮಾತುಕತೆಯನ್ನು ಕೂಡ ನಡೆಸಿ ಟಿಕೆಟ್ ದರವನ್ನ ಕೂಡ ಫಿಕ್ಸ್ ಮಾಡಿದೆ. ಮೂಲಗಳ ಪ್ರಕಾರ ಈ ಬಾರಿಯ ಫ್ಲವರ್ ಶೋಗೆ ಸುಮಾರು 15 ಲಕ್ಷ ಜನ ವಿಸಿಟ್ ಮಾಡೋ ಸಾಧ್ಯತೆ ಇದೆ.
ಸ್ವಾತಿ ಫುಲಗಂಟಿ ಮೆಟ್ರೋ ಬ್ಯುರೊ ಬೆಂಗಳೂರು