Wednesday, January 22, 2025

ಜೀವ ಬಿಡುತ್ತೇವೆ ಸಿದ್ಧಾಂತ ಬಿಡಲ್ಲ: ಸಂಸದ ತೇಜಸ್ವಿ ಸೂರ್ಯ

ಬೆಳ್ಳಾರೆ: ‘ಪ್ರವೀಣ್‌ ನೆಟ್ಟಾರು ಕೊಲೆಯಂತಹ ಪ್ರಕರಣಗಳು ಮರುಕಳಿಸುತ್ತಿವೆ. ಈ ರೀತಿ ಆಗಬಾರದಿತ್ತು. ಪ್ರತಿ ಬಾರಿ ನಾವು ನಮ್ಮ ಕಾರ್ಯಕರ್ತರನ್ನು ಈ ರೀತಿ ದುಃಖದಿಂದ ಕಳುಹಿಸಿಕೊಟ್ಟಾಗಲೂ ಇಂತಹ ಸಂಕಲ್ಪಮಾಡಿರುತ್ತೇವೆ. ಆದರೆ, ಪ್ರವೀಣನ ಸಾವು ಇಡೀ ದೇಶವನ್ನು ರಾಜ್ಯವನ್ನು ಎಬ್ಬಿಸಿದೆ’ ಎಂದು ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದರು.

ಪ್ರವೀಣ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾರ್ಯಕರ್ತರಲ್ಲಿ ನಾನು ಮಾಡುವ ಮನವಿ ಇಷ್ಟೇ. ಇಂತಹ ಘಟನೆಗಳಿಂದ ಯಾವ ಕಾರಣಕ್ಕೂ ಧೃತಿಗೆಡಬೇಕಿಲ್ಲ. ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು ಹಾಗೂ ಶಿವಾಜಿ ಅವರಲ್ಲಿ ಹರಿಯುತ್ತಿದ್ದಂತಹ ಕ್ಷಾತ್ರ ರಕ್ತವೇ ನಮ್ಮಲ್ಲೂ ಹರಿಯುತ್ತಿದೆ. ಈ ಯುದ್ಧ ಇವತ್ತು ನಾಳೆಗೆ ಮುಗಿಯುವುದಿಲ್ಲ. ಸಂಘಟಿತರಾಗಿದ್ದರೆ ಮಾತ್ರ ಈ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ. ಸಂಘ ಶಕ್ತಿ ಕಲಿಯುಗೇ ಎಂಬುದು ನಮ್ಮ ಮಂತ್ರ. ನಾವು ಗಟ್ಟಿಯಾಗಿರಬೇಕು. ಒಗ್ಗಟ್ಟಿನಲ್ಲಿರಬೇಕು‘ ಎಂದರು.

ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ರಾಜ್ಯ ಸರ್ಕಾರ ಭಯೋತ್ಪಾದನಾ ನಿಗ್ರಹ ದಳದ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಭರವಸೆಯನ್ನೂ ನೀಡಿದೆ. ಈ ರೀತಿಯ ಮಾನಸಿಕತೆಯನ್ನು ಮೂಲೋತ್ಪಾಟನೆ ಮಾಡಲು ನೂರಕ್ಕೆ ನೂರು ಬದ್ಧತೆಯಿಂದ ಕೆಲಸ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಪ್ರವೀಣ್​​ ಅವರನ್ನು ಅವರ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮಗನೇ ಹೊಡೆದಿರುವಂಥಹದ್ದು ಅತ್ಯಂತ ಬೇಸರದ ಸಂಗತಿ. ಅನ್ನ ಹಾಕಿದ್ದ, ಕೆಲಸ ಕೊಟ್ಟಿದ್ದವರನ್ನೇ ಕೊಲ್ಲುವ ಇಂತಹ ಪರಿಸ್ಥಿತಿಯಲ್ಲಿ ಯಾರನ್ನಾದರೂ ನಂಬುವುದು ಹೇಗೆ. ಇಂತಹ ಮನಃಸ್ಥಿತಿ ದೇಶವನ್ನು ಯಾವ ಸ್ಥಿತಿಗೆ ಕೊಂಡೊಯ್ದಿದೆ ಎಂದು ಆಲೋಚಿಸಬೇಕು‘ ಎಂದರು.

ಬಿಜೆಪಿ ಕಾರ್ಯಕರ್ತರ ಸಿಟ್ಟಿನಿಂದ ನಮಗೆ ಲಾಭ ಆಗುತ್ತದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಕೆ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರು ತಮ್ಮ ಸಿಟ್ಟು ಮತ್ತು ನೋವನ್ನು ವ್ಯಕ್ತ ಪಡಿಸಿರಬಹುದು. ಆದರೆ, ಇದರಿಂದ ಲಾಭ ಆಗುತ್ತದೆ ಎಂದು ನೀವು ಭಾವಿಸಬೇಡಿ. ಹಿಂದುತ್ವ ನಮ್ಮ ಜೀವಾಳ. ಜೀವವನ್ನಾದರೂ ಬಿಡುತ್ತೇವೆ ಸಿದ್ಧಾಂತ ಬಿಡುವುದಿಲ್ಲ ಎಂಬ ಕಾರ್ಯಕರ್ತರೇ ನಮ್ಮ ತಾಕತ್ತು’ ಎಂದರು.

ಈ ಪ್ರಕರಣದಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ. ಅದರ ಬಗ್ಗೆ ಯಾವುದೇ ಸಂಶಯ ಬೇಡ. ಇಡೀ ಸಂಘಟನೆ ಕುಟುಂಬದ ಒಟ್ಟಿಗಿದೆ. ಕಾರ್ಯಕರ್ತರು ಅವರ ಜೊತೆಯಲ್ಲಿದ್ದಾರೆ. ಕುಟುಂಬಕ್ಕೆ ಬೇಕಾದ ಎಲ್ಲ ಸಹಾಯವನ್ನು ಬಿಜೆಪಿ ಯುವಮೋರ್ಚಾ ಹಾಗೂ ಸರ್ಕಾರ ಮಾಡಲಿದೆ‘ ಎಂದರು.

RELATED ARTICLES

Related Articles

TRENDING ARTICLES