Monday, December 23, 2024

ಪ್ರವೀಣ್ ಮನೆಗೆ ದೌಡಾಯಿಸಿ ಬಂದ ಮುಖ್ಯಮಂತ್ರಿ

ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಬಿಜೆಪಿ ನಾಯಕರಿಗೇ ಸವಾಲಾಗಿ ಪರಿಣಮಿಸಿದೆ. ಬಿಜೆಪಿ ಸರಕಾರ ಇದ್ದರೂ, ಕಾರ್ಯಕರ್ತರಿಗೆ ರಕ್ಷಣೆ ಇಲ್ಲವೆಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೆ, ಕಾರ್ಯಕರ್ತರು ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಪ್ರವೀಣ್ ಮನೆಗೆ ಆಗಮಿಸಿದ ನಾಯಕರ ಎದುರಲ್ಲೇ ಮನೆಯವರು, ಪಕ್ಷದ ಕಾರ್ಯಕರ್ತರು ಸಿಡಿ ನುಡಿಯ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಪ್ರಶ್ನೆಗಳನ್ನು ಕೇಳಿ ನಾಯಕರು ಮೂಕ ಪ್ರೇಕ್ಷಕರಾಗುತ್ತಿದ್ದಾರೆ.

ಸಚಿವ ಅಂಗಾರ, ಮನೆಗೆ ಬಂದಿದ್ದಾಗ ಉದ್ರಿಕ್ತ ಕಾರ್ಯಕರ್ತರು,ನಾಯಕರೆಲ್ಲಾ ಅರ್ಧಕ್ಕೆ ಹೋದರಲ್ಲ..? ನೀವ್ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರವೀಣ್ ಮನೆಗೆ ಬಂದಾಗ, ಪ್ರವೀಣ್ ಪತ್ನಿಯೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಮಗನಿಗೇ, ಮಗಳಿಗೇ ಈ ಗತಿಯಾಗುತ್ತಿದ್ದರೆ ನೀವು ಸುಮ್ಮನಿರುತ್ತಿದ್ರಾ..? ನಿಮ್ಮ ಪರಿಹಾರದ ಹಣ ನಮಗೆ ಬೇಡ. ಪರಿಹಾರ ನೀಡಿದರೆ ಪ್ರವೀಣ್ ಮತ್ತೆ ಬರುವುದಿಲ್ಲ ಎಂದು ಗದರಿದ್ದಾರೆ. ಪ್ರವೀಣ್ ಪ್ರತಿ ಬಾರಿ ಪಕ್ಷ ಪಕ್ಷ ಎಂದು ಹಿಂದೆ ಓಡುತ್ತಿದ್ದರು. ಕುಂಜಾಡಿಯಲ್ಲಿ ಏನೇ ಕಾರ್ಯಕ್ರಮ ಆದರೂ ನಳಿನಣ್ಣ ಎಂದು ಹಿಂದೆ ಹೋಗುತ್ತಿದ್ದರು. ಈಗ ಇವರಿಗೆ ಏನು ಗತಿ ಬಂತು.. ನಳಿನಣ್ಣ ಈಗ ಎಲ್ಲಿದ್ದಾರೆ ಎಂದು ಪ್ರವೀಣ್ ಪತ್ನಿ ಪ್ರಶ್ನಿಸಿದಾಗ ಶಾಸಕ ಮಠಂದೂರು ಬಳಿ ಉತ್ತರವೇ ಇರಲಿಲ್ಲ. ಅಲ್ಲಿಯೇ ಇದ್ದ ಕಾರ್ಯಕರ್ತರೊಬ್ಬರು ನಿಮಗೆ ಆಡಳಿತ ಮಾಡಲು ಬರುವುದಿಲ್ಲ. ನೀವು ಯೋಗಿ ಆಡಳಿತ ನೋಡಿ ಕಲಿಯಿರಿ ಎಂದು ಸಲಹೆ ಕೊಟ್ಟಿದ್ದಾರೆ.

ಇದೇ ವೇಳೆ, ಪೊಲೀಸರು ಇಬ್ಬರನ್ನು ಬಂಧಿಸಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸವಣೂರಿನ ಝಾಕೀರ್ ಮತ್ತು ಮಹಮ್ಮದ್ ಶಫೀಕ್ ಬಂಧಿತರು. ಇವರಿಬ್ಬರು ಕೂಡ SDPI ಮತ್ತು ಪಿಎಫ್ಐ ಕಾರ್ಯಕರ್ತರು ಎನ್ನಲಾಗಿದ್ದು, ಪ್ರವೀಣ್ ಹತ್ಯೆಗೆ ಸ್ಕೆಚ್ ರೂಪಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಹತ್ಯೆ ನಡೆಸಿದವರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಕೇರಳಕ್ಕೆ ತೆರಳಿ ಹುಡುಕಾಟ ಆರಂಭಿಸಿದ್ದಾರೆ. ಇದೇ ವೇಳೆ, ತನಿಖೆಗೆ ಕೇರಳ ಪೊಲೀಸರ ಸಹಕಾರವನ್ನೂ ಪಡೆದಿದ್ದಾರೆ.

ಇನ್ನೊಂದೆಡೆ ಪ್ರವೀಣ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಗುವ ಲಕ್ಷಣಗಳು ಗೋಚರಿಸಿವೆ. ಹಂತಕರ ಟಾರ್ಗೆಟ್ ಪ್ರವೀಣ್ ಆಗಿರಲಿಲ್ಲವಾ..? ಅಥವಾ ಪ್ರವೀಣ್‌ ಸೇರಿ ಒಟ್ಟು ಇಬ್ಬರನ್ನು ಕೊಲೆ ಮಾಡುವುದು ಹಂತಕರ ಗುರಿಯಾಗಿತ್ತಾ..? ಅಥವಾ ಬೇರೆಯಾತನನ್ನು ಮುಗಿಸಲು ಬಂದು ಪ್ರವೀಣ್‌ನನ್ನು ಕೊಲೆ ಮಾಡಲಾಯಿತಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇದಕ್ಕೆ ಪುಷ್ಠಿ ಎಂಬಂತೆ ಹಿಂದೂ ಮುಖಂಡರು ಹಂತಕರು ಬಂದಿದ್ದ ಸ್ಫೋಟಕ ವಿಡಿಯೋವೊಂದನ್ನು ಪೊಲೀಸರಿಗೆ ನೀಡಿದ್ದಾರೆ.

ಬುಧವಾರ ಸಂಘರ್ಷ, ಆಕ್ರೋಶಕ್ಕೆ ತುತ್ತಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆ ಸಹಜ ಸ್ಥಿತಿಗೆ ಮರಳಿದೆ. ಮುಚ್ಚಿದ್ದ ಶಾಲೆ ತೆರೆದುಕೊಂಡಿದ್ದರೆ, ಅಂಗಡಿ, ವ್ಯಾಪಾರ ಸಂಕೀರ್ಣಗಳು ಓಪನ್ ಆಗಿವೆ. ಬಸ್ ಇನ್ನಿತರ ವಾಹನಗಳು ಸೇವೆ ಆರಂಭಿಸಿವೆ.ಇದೇ ವೇಳೆ, ಪೊಲೀಸರು ತನಿಖೆಗಾಗಿ ಬೆಳ್ಳಾರೆ ಪೇಟೆ ಆಸುಪಾಸಿನ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದು, ಅಪರಾಧಿಗಳ ಸುಳಿವು ಪಡೆದಿದ್ದಾರೆ. ಅದರ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES