Thursday, January 9, 2025

ವಿಕ್ರಾಂತ್ ರೋಣ: ಮುಂಜಾನೆಯಿಂದಲೇ ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಕೆಜಿಎಫ್ ನಂತ್ರ ಕನ್ನಡದಿಂದ ವಿಶ್ವ ಸಿನಿದುನಿಯಾಗೆ ವಿಕ್ರಾಂತ್ ರೋಣ ಮತ್ತೊಂದು ಮಾಸ್ಟರ್​ಪೀಸ್ ಸಿನಿಮಾ ಆಗಿ ಹೊರಹೊಮ್ಮಿದೆ. ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮ ಹೇಗಿತ್ತು ಅನ್ನೋದ್ರ ಜೊತೆಗೆ ಯಜಮಾನನ ನಟನೆ ಹಾಗೂ ಸಿನಿಮಾ ಬಗ್ಗೆ ಪ್ರಿಯಾ ಸುದೀಪ್ ಹೇಳಿದ್ದೇನು ಅನ್ನೋ ಎಕ್ಸ್​ಕ್ಲೂಸಿವ್ ಪ್ಯಾಕೇಜ್ ನಿಮಗಾಗಿ ಕಾಯ್ತಿದೆ.

ಮುಂಜಾನೆಯಿಂದಲೇ ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಕರುನಾಡಲ್ಲಿ 325 ಸಿಂಗಲ್ ಸ್ಕ್ರೀನ್.. 65 ಮಲ್ಟಿಪ್ಲೆಕ್ಸ್​ನಲ್ಲಿ ತೆರೆಗೆ

ಕಟೌಟ್​ಗೆ ಫ್ಯಾನ್ಸ್ ಬೃಹತ್ ಹೂಮಾಲೆ, ಹಾಲಿನ ಅಭಿಷೇಕ

ಈಡುಗಾಯಿ ಹೊಡೆದು, ಪಟಾಕಿ ಸಿಡಿಸಿ.. ಕಿಚ್ಚ ಕಿಚ್ಚ ಜೈಕಾರ

ಐವತ್ತಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಪ್ರದರ್ಶನಗಳ ಮೂಲಕ ನೂತನ ದಾಖಲೆ ಬರೆದಿದೆ ವಿಕ್ರಾಂತ್ ರೋಣ. ಬಹುತೇಕ ದೇಶಗಳಲ್ಲಿ ನಿನ್ನೆಯೇ ಪ್ರೀಮಿಯರ್ ಶೋ ಆಗಿತ್ತು. ಆದ್ರೆ ಇಂದು ಎಂಜಿ ರಸ್ತೆಯ ಶಂಕರ್​ನಾಗ್​ ಚಿತ್ರಮಂದಿರಲ್ಲಿ ಮುಂಜಾನೆ 5.30ಕ್ಕೆ ಮೊದಲ ಶೋ ಪ್ರದರ್ಶನ ಕಾಣೋ ಮೂಲಕ ದೇಶದಲ್ಲೇ ಮೊದಲ ಶೋ ಅನಿಸಿಕೊಳ್ತು.

ಇನ್ನು ಊರ್ವಶಿ, ವೀರೇಶ್, ಪ್ರಸನ್ನ, ಪೂರ್ಣಿಮಾ, ಶ್ರೀನಿವಾಸ್ ಹೀಗೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆ ಹಾಗೂ 7 ಗಂಟೆಗೆ ಪ್ರದರ್ಶನಗಳು ಶುರುವಾದವು. ಕಿಚ್ಚನ ಡೈಹಾರ್ಡ್​ ಫ್ಯಾನ್ಸ್ ಕಟೌಟ್​ಗಳಿಗೆ ಹೂವಿನ ಅಲಂಕಾರ ಮಾಡಿ, ಹಾಲಿನ ಅಭಿಷೇಕ ಮಾಡಿ, ಈಡುಗಾಯಿ ಹೊಡೆದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.

ಊರ್ವಶಿ ಥಿಯೇಟರ್​ಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಕಾಲೇಜ್ ಹುಡುಗರು ಯೂನಿಫಾರ್ಮ್​ನಲ್ಲೇ ಬಂದು ಚಿತ್ರವೀಕ್ಷಿಸಿದ್ದು ವಿಶೇಷ.

ಇನ್ನು ಕಿಚ್ಚ ಸುದೀಪ್ ಪ್ರೀ- ರಿಲೀಸ್ ಇವೆಂಟ್​ನಲ್ಲಿ ಅಭಿಮಾನಿಯಿಂದ ಉಡುಗೊರೆಯಾಗಿ ಜಾಕೆಟ್ ಪಡೆದಿದ್ರು. ಅದನ್ನ ತಯಾರಿಸಿದ ವ್ಯಕ್ತಿಯಿಂದಲೇ ಮತ್ತೊಬ್ಬ ಅಭಿಮಾನಿ ಅಂಥದ್ದೇ ವೈಟ್ ಕಲರ್ ಜಾಕೆಟ್ ಮಾಡಿಸಿ, ಅದನ್ನ ಧರಿಸಿ, ಸಿನಿಮಾ ನೋಡಲು ಬಂದಿದ್ದರು.

ಜೆಪಿ ನಗರ, ದಾವಣಗೆರೆ, ಬಳ್ಳಾರಿ, ತುಮಕೂರು ಹೀಗೆ ರಾಜ್ಯದ ಮೂಲೆ ಮೂಲೆಯಿಂದ ಸುದೀಪ್ ಫ್ಯಾನ್ಸ್ ರೋಣನ ದರ್ಶನ ಪಡೆಯಲು ಊರ್ವಶಿಗೆ ಬಂದಿದ್ರು. ಅಲ್ಲದೆ, ಸುದೀಪ್ ಪತ್ನಿ ಪ್ರಿಯಾ ಸುದೀಪ್, ನಟ ನಿರೂಪ್ ಭಂಡಾರಿ, ನಿರ್ದೇಶಕ ನಂದಕಿಶೋರ್ ಹೀಗೆ ಸಾಕಷ್ಟು ಮಂದಿ ಫ್ಯಾನ್ಸ್ ಜೊತೆ ಕೂತು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ್ರು.

ಸಿನಿಮಾ ಮುಗಿದ ಬಳಿಕ ಪವರ್ ಟಿವಿ ಜೊತೆ ಮಾತನಾಡಿದ ಪ್ರಿಯಾ ಸುದೀಪ್, ನಾನು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದೀನಿ. ಈಗ ಹೋಗಿ ಅವ್ರಿಗೊಂದು ಹಗ್ ಕೊಡಬೇಕು. ಅವ್ರ ನಟನೆ ಬಗ್ಗೆ ಮಾತನಾಡೋದೇ ಬೇಡ. ಮೇಕಿಂಗ್ ಅದ್ಭುತವಾಗಿದೆ. ಎಲ್ಲರ ಶ್ರಮವಿದೆ. ಸದ್ಯ 2ಡಿಯಲ್ಲಿ ನೋಡಿದ್ದೀನಿ. ಮಗಳು ಮತ್ತು ಅವ್ರೊಂದಿಗೆ ತ್ರೀಡಿ ನೋಡ್ತೀನಿ ಅಂತ ಖುಷಿ ವ್ಯಕ್ತಪಡಿಸಿದ್ರು.

ಇನ್ನು ವೀರೇಶ್ ಚಿತ್ರಮಂದಿರದಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಕ್ಕಮ್ಮ ಸಾಂಗ್​ಗೆ ರೊಚ್ಚಿಗೆದ್ದು ಕುಣಿದು ಕುಪ್ಪಳಿಸಿದ್ರು. ಸಿನಿಮಾ ಬಗ್ಗೆ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ನೀಡಿದ್ರು.

ನಮ್ಮ ರಾಜ್ಯ ಒಂದರಲ್ಲೇ ಮೊದಲ ದಿನ 2500 ಶೋಗಳು ಪ್ರದರ್ಶಗೊಂಡಿವೆ. ಸುಮಾರು 900 ಸ್ಕ್ರೀನ್ಸ್​ನಲ್ಲಿ ತ್ರೀಡಿ ಹಾಗೂ 1600 ಸ್ಕ್ರೀನ್ಸ್​ನಲ್ಲಿ 2ಡಿ ಪ್ರದರ್ಶನವಾಗಿದೆ. ಆಂಧ್ರ- ತೆಲಂಗಾಣದಲ್ಲಿ 1400 ಶೋ, ತಮಿಳುನಾಡಿನಲ್ಲಿ 180 ಸಿಂಗಲ್ ಸ್ಕ್ರೀನ್ ಹಾಗೂ 70 ಮಲ್ಟಿಪ್ಲೆಕ್ಸ್, ಕೇರಳಾದಲ್ಲಿ 110 ಸ್ಕ್ರೀನ್ಸ್​​ನಲ್ಲಿ 600 ಶೋ, ಉತ್ತರ ಭಾರತದ 690 ಸ್ಕ್ರೀನ್ಸ್​ನಲ್ಲಿ 2800 ಶೋ ಆಗಿದೆ. ಇನ್ನು ವಿದೇಶಗಳಲ್ಲಿ 600 ಸ್ಕ್ರೀನ್ಸ್​ನಲ್ಲಿ 1500 ಶೋಗಳು ಪ್ರದರ್ಶನಗೊಂಡಿರೋದು ಇಂಟರೆಸ್ಟಿಂಗ್.

ಮನರಂಜನೆಯೇ ಸಿನಿಮಾದ ಮೂಲ ಆದ್ರೂ, ಅದನ್ನ ನೋಡುಗರ ಅಭಿರುಚಿಗೆ ತಕ್ಕನಾಗಿ ಕಟ್ಟಿಕೊಡೋದು ನಿರ್ದೇಶಕ ಹಾಗೂ ನಿರ್ಮಾಪಕರ ಕರ್ತವ್ಯ ಆಗಿರುತ್ತೆ. ಆ ನಿಟ್ಟಿನಲ್ಲಿ ಕಿಚ್ಚನ ಫ್ಯಾನ್ಸ್​ಗಷ್ಟೇ ಅಲ್ಲ, ಇಡೀ ಚಿತ್ರ ಪ್ರೇಮಿಗಳಿಗೆ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸ್ಪೆಷಲ್ ಟ್ರೀಟ್ ನೀಡಿದ್ದಾರೆ. ಮಿಸ್ ಮಾಡ್ಕೋಬೇಡಿ ರೋಣನ ಪ್ರಪಂಚ. ಅದೊಂದು ವಿಸ್ಮಯಕಾರಿ ಹಾಗೂ ಚಮತ್ಕಾರಿ ಪರಪಂಚ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES