ಕಥೆಯನ್ನ ಮುಚ್ಚಿಡಬಹುದು. ಆದ್ರೆ ಭಯಾನ ಮುಚ್ಚಿಡೋಕಾಗಲ್ಲ. ಯೆಸ್.. ವಿಕ್ರಾಂತ್ ರೋಣ ಇಲ್ಲಿವರೆಗೂ ಮುಚ್ಚಿಟ್ಟಿದ್ದ ಗುಮ್ಮನ ರಹಸ್ಯ ಏನು ಅನ್ನೋದು ಇದೀಗ ಜಗಜ್ಜಾಹಿರಾಗಿದೆ. ಭಯಾನೇ ತುಂಬಿದ ಊರಿಗೆ ಭಯ ಬಿಡಿಸೋಕೆ ಬಂದ ಗುಮ್ಮನ ಹಾವಳಿ ಬಲು ಜೋರಿದೆ. ಸದ್ಯ ವಿಶ್ವದಾದ್ಯಂತ ಚಾಲ್ತಿಯಲ್ಲಿರೋ ಏಕೈಕ ಹೆಸ್ರು ವಿಕ್ರಾಂತ್ ರೋಣ. ಇಷ್ಟಕ್ಕೂ ರೋಣ ಸಿನಿಮಾ ಹೇಗಿದೆ..? ಫಿಲ್ಮ್ ಮೇಕಿಂಗ್ನಲ್ಲಿ ಹೊಸ ಮುನ್ನಡಿ ಬರೆದ ಈ ಚಿತ್ರಕ್ಕೆ ಪ್ರೇಕ್ಷಕಪ್ರಭು ಏನಂದ ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್ ನಿಮ್ಮ ಮುಂದೆ.
ಕಿಚ್ಚ ಕರಿಯರ್ನ ಬಿಗ್ಗೆಸ್ಟ್ ರಿಲೀಸ್.. ಬಿಗ್ ಬಜೆಟ್ ವೆಂಚರ್
50 ರಾಷ್ಟ್ರ.. 9 ಸಾವಿರ ಶೋ.. ವಿಕ್ರಾಂತ್ ರೋಣನ ದರ್ಶನ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಕರಿಯರ್ನಲ್ಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ ಸಿನಿಮಾ ವಿಕ್ರಾಂತ್ ರೋಣ. ಹೆಜ್ಜೆ ಹೆಜ್ಜೆಗೂ ರೋಣ ಅಬ್ಬರಿಸಿ ಬೊಬ್ಬಿರಿದು, ವರ್ಲ್ಡ್ ವೈಡ್ ರಿಲೀಸ್ ಆಗಿ ಸದ್ದು ಮಾಡ್ತಿದ್ದಾನೆ. ರಾ ರಾ ರಕ್ಕಮ್ಮನ ಹುಕ್ ಸ್ಟೆಪ್ಸ್ಗೆ ಫಿದಾ ಆಗಿದ್ದ ಚಿತ್ರರಸಿಕರು ಥಿಯೇಟರ್ನಲ್ಲಿ ಗಡಾಂಗ್ ರಕ್ಕಮ್ಮನ ಹಾಡಿಗೆ ಹುಚ್ಚೆದ್ದು ಕುಣಿದಿದ್ದಾರೆ. ಫ್ಯಾಂಟಸಿ ಜಗತ್ತಿನೊಳಗೆ ಗುಮ್ಮನ ಹೊಸ ಅವತಾರವನ್ನು ದರ್ಶನ ಮಾಡಿದ ಪ್ರೇಕ್ಷಕ ಪೆಚ್ಚು ಬಿದ್ದಿದ್ದಾನೆ.
ವಿಶ್ವದಾದ್ಯಂತ 2ಡಿ ಹಾಗೂ 3ಡಿ ವರ್ಷನ್ನಲ್ಲಿ ವಿಕ್ರಾಂತ್ ರೋಣ ಸಿನಿಮಾ ತೆರೆ ಕಂಡಿದೆ. ಇಂದಿನಿಂದ ಎಲ್ಲಾಕಡೆ ಕಿಚ್ಚ ಮೇನಿಯಾ ಶುರುವಾಗಿದೆ. ದುಬೈ, ಮುಂಬೈ , ದಿಲ್ಲಿ ಹೀಗೆ ಸೌಥ್ ಟು ನಾರ್ಥ್ ಸಿಕ್ಕಾಪಟ್ಟೆ ಪ್ರಮೋಷನ್ ಮಾಡಿದ್ದ ಚಿತ್ರತಂಡ, ಇಂದು ಜನರ ರೆಸ್ಪಾನ್ಸ್ ಕಂಡು ದಿಲ್ಖುಷ್ ಆಗಿದೆ. ರೋಣನ ರಂಗು ಕಳೆಗಟ್ಟಿದ್ದು, ಸಿನಿಮಾ ನೋಡಿದ ಪ್ರೇಕ್ಷಕರಿಗೆ ಫ್ಯಾಂಟಸಿಯ ಅದ್ಭುತ ಜಗತ್ತಿನ ದರ್ಶನವಾಗಿದೆ.
ಚಿತ್ರ: ವಿಕ್ರಾಂತ್ ರೋಣ
ನಿರ್ದೇಶನ: ಅನೂಪ್ ಭಂಡಾರಿ
ನಿರ್ಮಾಣ: ಜಾಕ್ ಮಂಜುನಾಥ್
ಸಂಗೀತ: ಬಿ. ಅಜನೀಶ್ ಲೋಕನಾಥ್
ಸಿನಿಮಾಟೋಗ್ರಫಿ: ವಿಲಿಯಂ ಡೇವಿಡ್
ತಾರಾಗಣ: ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡೀಸ್, ಮಿಲನಾ ನಾಗರಾಜ್ ಮುಂತಾದವರು.
ವಿಕ್ರಾಂತ್ ರೋಣ ಸ್ಟೋರಿಲೈನ್ :
ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಗ್ಲೋಬಲ್ ಸಿನಿಮಾ ಅಂತ ಪ್ರಚಾರ ಗಿಟ್ಟಿಸಿದ್ದ ಟೀಂ ರೋಣ, ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿ ಮಾಡದೆ ಮಸ್ತ್ ಮನರಂಜನೆ ನೀಡಿದೆ. ಸಸ್ಪೆನ್ಸ್ ಥ್ರಿಲ್ಲರ್ನ ಕೊನೆವರೆಗೂ ಬಚ್ಚಿಟ್ಟು, ಕಮರೊಟ್ಟು ಕಾಡಿನ ರಹಸ್ಯವನ್ನು ಅಮೋಘವಾಗಿ ತೋರಿಸಿದೆ. ಅದೊಂದು ಭಯ ತುಂಬಿದ ಊರು. ಅಲ್ಲಿ ಆಗೋ ಮಕ್ಕಳ ಸಾವಿಗೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಕತ್ತಲಾದ ಮೇಲೆ ಅಲ್ಲಿ ಯಾರೂ ಸುಳಿಯೋದಿಲ್ಲ. ಖಾಕಿ ಸಾವಿಗೂ ಸುಳಿವೇ ಸಿಗದಂತೆ ಗುಮ್ಮ ಎಲ್ಲರನ್ನೂ ಕೊಲ್ಲುತ್ತಾ ಬರುತ್ತೆ. ಈ ಕಗ್ಗತ್ತಲ ಕಾಡಿಗೆ ಭಯಾನೇ ಇಲ್ಲದಿರೋ ಪೈಲ್ವಾನ ಬರ್ತಾನೆ. ಅವನು ಇಲ್ಲಿಗೆ ಬರೋಕೆ ಬಲವಾದ ಕಾರಣ ಕೂಡ ಇದೆ. ಆ ಕಾರಣ ಏನು..? ಅಸಲಿ ಗುಮ್ಮ ಯಾರು..? ಗುಮ್ಮ- ರೋಣನ ಸೆಣಸಾಟ ಹೇಗಿರಲಿದೆ ಅನ್ನೋದೇ ಸಿನಿಮಾದ ಒನ್ ಲೈನ್ ಸ್ಟೋರಿ.
ವಿಕ್ರಾಂತ್ ರೋಣ ಆರ್ಟಿಸ್ಟ್ ಪರ್ಫಾಮೆನ್ಸ್ :
ಸಕಲಕಲಾವಲ್ಲಭ, ಅಭಿನಯ ಚಕ್ರವರ್ತಿಯ ನೆಕ್ಸ್ಟ್ ಲೆವೆಲ್ ಅಭಿನಯ ಇಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ. ನೀರು ಕುಡಿದಷ್ಟೇ ಸಲೀಸಾಗಿ ನಟಿಸುವ ಕಿಚ್ಚ ಸುದೀಪ್, ಈ ಚಿತ್ರದಲ್ಲಿ ಕಣ್ಣಲ್ಲೇ ಅಭಿನಯಿಸುತ್ತಾರೆ. ಡೈಲಾಗ್ ಕಡಿಮೆ ಇದ್ರೂ, ಸಿನಿಮಾ ಪೂರ್ತಿ ಅವ್ರ ಮ್ಯಾನರಿಸಂ ಹತ್ತು ಪಟ್ಟು ಮಾತನಾಡುತ್ತದೆ. ನಿಮ್ಮನ್ನು ಬೆಚ್ಚಿ ಬೆವರಿಳಿಸೋ ಸಾಹಸದಲ್ಲಿ ಪೂರ್ಣ ಅಂಕ ಗುಮ್ಮನ ಜತೆ ಕಿಚ್ಚ ಸುದೀಪ್ಗೂ ಸೇರಬೇಕು. ಸಸ್ಪೆನ್ಸ್ನ ಕೊನೆಯವರೆಗೂ ಕ್ಯಾರಿ ಮಾಡಿರೋ ಸುದೀಪ್, ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಾರೆ.
ಕಮರೊಟ್ಟು ಹೆಸರಲ್ಲೇ ಒಂದು ಭಯ ಇದೆ. ಅದನ್ನು ರಂಗಿತರಂಗ ಸಿನಿಮಾ ಸಾಬೀತು ಮಾಡಿತ್ತು. ಇದೀಗ ವಿಕ್ರಾಂತ್ ರೋಣ ಆ ಭಯವನ್ನು ನೂರು ಪಟ್ಟು ಜಾಸ್ತಿ ಮಾಡಿದೆ. ಕಮರೊಟ್ಟು ಊರು ಸಾವಿರ ನಿಗೂಢಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿರೋ ಜಾಗ. ಇಲ್ಲಿ ಸೂರ್ಯನ ಬಿಸಿಲು ಕೂಡ ನೆಲ ತಾಕುವುದಿಲ್ಲ. ಅಲ್ಲಿಗೆ ಪೊಲೀಸಪ್ಪನಾಗಿ ಎಂಟ್ರಿ ಕೊಡೋ ಸುದೀಪ್ ಖಡಕ್ ರೋಲ್ ಲೀಡ್ ಮಾಡಿದ್ದಾರೆ. 28 ವರ್ಷಗಳ ನಂತ್ರ ಹುಟ್ಟೂರಿಗೆ ಬರೋ ನಿರೂಪ್ ಭಂಡಾರಿ ಸಂಜು ಪಾತ್ರದಲ್ಲಿ ಕಥೆಗೆ ಟ್ವಿಸ್ಟ್ ಕೊಡುತ್ತಾರೆ. ನಾಯಕಿ ನೀತಾ ಅಶೋಕ್, ಪನ್ನಾ ಪಾತ್ರದಲ್ಲಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಹಿಂಟ್ ಬಿಟ್ಟು ಕೊಡೋ ಕೆಲಸ ಮಾಡುತ್ತಾರೆ.
ಇವ್ರ್ ಬಿಟ್ಟು, ಅವ್ರ್ ಬಿಟ್ಟು, ಇವ್ರಱರು ಅಂತ ಕೊನೆಯವರೆಗೂ ಗೊಂದಲ ಮೂಡಿಸುವ ಸಿನಿಮಾ ವಿಕ್ರಾಂತ್ ರೋಣ. ಚಿತ್ರದ ಪ್ರತಿ ಪಾತ್ರಗಳು, ಕುತೂಹಲವನ್ನು ಬಿಟ್ಟುಕೊಡದೆ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿವೆ. ಗುಮ್ಮ ಯಾರು..? ಸರಣಿ ಸಾವುಗಳ ಹಿಂದೆ ಇರೋ ದೊಡ್ಡ ಗುಮ್ಮ ಯಾವುದು ಅಂತ ನಿಮಗೆ ಅರ್ಧದಲ್ಲೇ ಗೊತ್ತಾಗದೇ ಇದ್ರೆ, ಈ ಕ್ರೆಡಿಟ್ ಎಲ್ಲಾ ಕಲಾವಿದರಿಗೂ ಸಲ್ಲಬೇಕು.
ವಿಕ್ರಾಂತ್ ರೋಣ ಪ್ಲಸ್ ಪಾಯಿಂಟ್ಸ್ :
ಕುತೂಹಲ ಹುಟ್ಟಿಸೋ ರೋಚಕ ದೃಶ್ಯಗಳು
ಕಿಚ್ಚ ಸುದೀಪ್ ಮ್ಯಾನರಿಸಂ
ಕರಾಳ ಕಾಡಿನ ಕಗ್ಗತ್ತಲ ಪ್ರಪಂಚ
ವಿಎಫ್ಎಕ್ಸ್ ಎಫೆಕ್ಟ್
ರಕ್ಕಮ್ಮನ ಬಿಂದಾಸ್ ಸ್ಟೆಪ್
ತಂದೆ- ಮಗಳ ಸೆಂಟಿಮೆಂಟ್
ಭಯಾನಕ ಕ್ಲೈಮ್ಯಾಕ್ಸ್
ಶಿವು ಆರ್ಟ್ ವರ್ಕ್
ಅಜನೀಶ್ ಮ್ಯೂಸಿಕ್
ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ
ವಿಕ್ರಾಂತ್ ರೋಣ ಮೈನಸ್ ಪಾಯಿಂಟ್ಸ್ :
ಮೊದಲಾರ್ಧ ನೀರಸವಾಗಿ ಸಾಗಲಿದ್ದು, ದ್ವಿತೀಯಾರ್ಧ ಕೊಂಚ ವೇಗ ತೆಗೆದುಕೊಳ್ಳುತ್ತೆ. ಸಿನಿಮಾಗೆ ಕಥೆಯೇ ಲ್ಯಾಕ್ ಆಗಿರೋದ್ರಿಂದ ಕಿಚ್ಚನ ಮನೋಜ್ಞ ಅಭಿನಯ, ದೃಶ್ಯ ಚಿತ್ತಾರ ನೋಡುಗರನ್ನ ಅಷ್ಟಾಗಿ ರುಚಿಸುತ್ತಿಲ್ಲ. ಕಥೆ ಒಂಥರಾ ರಂಗಿತರಂಗ ಮುಂದುವರೆದ ಭಾಗದಂತಿದೆ. ಖಡಕ್ ವಿಲನ್ ಇಲ್ಲದಿರೋದು ಕೂಡ ಚಿತ್ರಕ್ಕೆ ಮೈನಸ್ ಅಂದ್ರೆ ತಪ್ಪಾಗಲ್ಲ.
ಇಷ್ಟು ಹೊರತುಪಡಿಸಿದರೆ ಮಿಕ್ಕಿದ್ದೆಲ್ಲಾ ಅದ್ಭುತ, ಅಮೋಘ, ಅದ್ವಿತೀಯ. ನೋಡುಗರಿಗೆ ಬೊಂಬಾಟ್ ದೃಶ್ಯ ವೈಭವ.
ವಿಕ್ರಾಂತ್ ರೋಣ ಫೈನಲ್ ಸ್ಟೇಟ್ಮೆಂಟ್ :
ಮೂಸೆಕುನ್ನಿ, ಲಾರೆನ್ಸ್ ಪಿಂಟೋ, ಮಹಾಬಲ, ಪಕ್ರು, ಮುನ್ನ, ಪನ್ನ, ಹೀಗೆ ಸಿನಿಮಾದಲ್ಲಿ ಕ್ಯೂರಿಯಾಸಿಟಿ ಮೂಡಿಸುವ ಅನೇಕ ಪಾತ್ರಗಳಿವೆ. ಒಂದೊಂದು ಪಾತ್ರ ಕೂಡ ಜೀವಂತಿಕೆಯಿಂದ ಸಿಲ್ವರ್ ಸ್ಕ್ರೀನ್ ಮೇಲೆ ಎಲ್ಲರ ಅಟೆನ್ಷನ್ ತಮ್ಮತ್ತ ಸೆಳೆಯುತ್ತೆ. ಒಟ್ಟಾರೆ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಹೈಲೈಟ್. ಕಂಟೆಂಟ್ ಪ್ಲಸ್ ಪಾಯಿಂಟ್. ಕಿಚ್ಚ ಆ್ಯಕ್ಟಿಂಗ್ ಅಲ್ಟಿಮೇಟ್. ಏನೂ ನಿರೀಕ್ಷೆ ಇಟ್ಟುಕೊಳ್ಳದೆ ವಿಕ್ರಾಂತ್ ರೋಣ ಸಿನಿಮಾ ನೋಡಿದ್ರೆ ಮಸ್ತ್ ಎಂಜಾಯ್ ಮಾಡಬಹುದು. ಇನ್ನು ಜಾಕ್ ಮಂಜು ಅವ್ರ ಪ್ರೊಡಕ್ಷನ್ ವ್ಯಾಲ್ಯೂಸ್, ಅನೂಪ್ ಭಂಡಾರಿಯ ಮೇಕಿಂಗ್ ಸ್ಟೈಲ್ ಹತ್ತು ಜನ ಮಾತನಾಡುವಂತಿದೆ. ಈ ವೀಕೆಂಡ್ ಸಿನಿಮಾ ನೋಡೋರಿಗೆ ಇದು ಮಸ್ತ್ ಕಿಕ್ ಕೊಡಲಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ