ನವದೆಹಲಿ: ಇದೇ ಮೊದಲಿಗೆ ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದಾರೆ. ದೇಶದ ಜನತೆ ಈ ವಿಚಾರಕ್ಕೆ ಖುಷಿಯಾಗಿದ್ದಾರೆ. ಆದ್ರೆ, ಈ ರಾಜಕೀಯ ನಾಯಕರಿಗೆ ಅದೇನಾಗಿದ್ಯೋ ಗೊತ್ತಿಲ್ಲ. ದೇಶದ ಪ್ರಥಮ ಪ್ರಜೆಯನ್ನೇ ವ್ಯಂಗ್ಯ ಮಾಡಿ ವಿವಾದ ಸೃಷ್ಠಿಸಿದ್ದಾರೆ. ಹಾಗಾದ್ರೆ, ಯಾರು ಈ ವಿವಾದ ಸೃಷ್ಠಿಸಿದ್ದು..?
ಲೋಕಸಭೆಯಲ್ಲಿ ನಾಲಿಗೆ ಹರಿಬಿಟ್ಟ ಅಧೀರ್ ರಂಜನ್ ಚೌಧರಿ. ರಾಷ್ಟ್ರಪತಿಯನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿ ಮೈಮೇಲೆ ವಿವಾದ ಎಳೆದುಕೊಂಡ ಕಾಂಗ್ರೆಸ್ ಸಂಸದ ಪೇಚಿಗೆ ಸಿಲುಕಿದರು.
ದೇಶದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ದೇಶಿಸಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ರಾಷ್ಟ್ರಪತ್ನಿ ಎಂದು ಉಲ್ಲೇಖಿಸಿದ್ದನ್ನು ಖಂಡಿಸಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಲೋಕಸಭೆಯಲ್ಲಿ ಆರಂಭಿಸಿದೆ. ಲೋಕಸಭೆಯಲ್ಲಿ ಈ ಕುರಿತು ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸೋನಿಯಾ ಗಾಂಧಿ “ಆದಿವಾಸಿ ವಿರೋಧಿ, ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ” ಎಂದೂ ಕೇಂದ್ರ ಸಚಿವೆ ಆರೋಪ ಮಾಡಿದ್ದಾರೆ.
ಈ ಆರೋಪದ ಕುರಿತು ಲೋಕಸಭೆಯ ಹೊರಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.
ಇತ್ತ ರಾಜ್ಯಸಭೆಯಲ್ಲೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಮುಗಿಬಿದ್ದಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಕ್ಷಮೆಯಾಚನೆಗೆ ಆಗ್ರಹಪಡಿಸಿದರು.
ಭಾರತದ ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ ಕಾಂಗ್ರೆಸ್ ಪಕ್ಷವು ದುರುದ್ದೇಶದಿಂದ ಅವರನ್ನು ಗುರಿ ಮಾಡಿಕೊಂಡಿದೆ. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ನಂತರವೂ ಅವರ ಮೇಲೆ ದಾಳಿಗಳು ನಡೆಯುವುದು ನಿಂತಿಲ್ಲ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.
ಅಧೀರ್ ರಂಜನ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ :
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ‘ರಾಷ್ಟ್ರಪತ್ನಿ’ ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಗುರಿಯಾಗಿರುವಾಗಲೇ, ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಖುದ್ದು ಹಾಜರಾಗುವಂತೆ ಮತ್ತು ತಮ್ಮ ಹೇಳಿಕೆಗಳಿಗೆ ಲಿಖಿತ ವಿವರಣೆಯನ್ನು ನೀಡುವಂತೆ ಎನ್ಸಿಡಬ್ಲ್ಯು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರಿಗೆ ನೋಟಿಸ್ ರವಾನಿಸಿದೆ. ವಿಚಾರಣೆಯನ್ನು ಆಗಸ್ಟ್ 3 ರಂದು ಬೆಳಿಗ್ಗೆ 11:30 ಕ್ಕೆ ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ ರಾಷ್ಟ್ರಪತಿ ವಿಚಾರ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಬ್ಯೂರೋ ರಿಪೋರ್ಟ್ ಪವರ್ ಟಿವಿ