Wednesday, January 22, 2025

ಕರಾವಳಿಯಲ್ಲಿ ಇಂದು ಆಟಿ ಅಮಾವಾಸ್ಯೆಯ ಸಂಭ್ರಮ

ತುಳುನಾಡು ಆಚಾರ – ವಿಚಾರ , ವಿಭಿನ್ನ ಸಂಸ್ಕೃತಿಗಳ ಬೀಡು. ಇಲ್ಲಿನ ಜನರ ಜೀವನ ಶೈಲಿ , ಆಹಾರ ಕ್ರಮಗಳು ವಿಭಿನ್ನವೇ ಸರಿ ಅದರಲ್ಲಿಯೂ ಇಲ್ಲಿನ ಪ್ರಮುಖ ಆಚರಣೆಯಲ್ಲಿ ಆಟಿ ಅಮಾವಾಸ್ಯೆ ಒಂದು ಹಾಗಾದರೆ ಏನಿದು ಆಟಿ ಅಮಾವಾಸ್ಯೆ ಇದರ ಮಹತ್ವ ತಿಳಿಯೋಣ ಬನ್ನಿ.

ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆ ತುಳುನಾಡಿನ ಜನರಿಗೆ ಬಹಳ ಮಹತ್ವದ ದಿನ. ಕರಾವಳಿ ಭಾಗದ ಪ್ರಮುಖ ಜಾನಪದ ಆಚರಣೆಯಾದ ಆಟಿ ಕಳೆಂಜ ಬರುವ ಸಮಯವಿದು. ಅದೇರೀತಿ ಕರ್ನಾಟಕದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿನ ಆಹಾರ ಪದ್ಧತಿ, ಜೀವನ ಶೈಲಿ ಆಚರಣಾ ಪದ್ಧತಿ ಇವೆಲ್ಲವೂ ವಿಶಿಷ್ಟವಾಗಿ ಕಾಣಸಿಗುತ್ತದೆ.

ಪಾಲೆ(ಹಾಳೆ) ಮರ :

ಹಾಳೆ ಮರ ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರ. ಆಟಿ ಅಮಾವಾಸ್ಯೆಯಂದು ಈ ಮರದಲ್ಲಿ ಮದ್ದಿನ ಅಂಶವನ್ನು ಹೊಂದಿದೆ. ಈ ಮರದ ಸಿಪ್ಪೆಯಿಂದ(ಕೆತ್ತೆ) ಮಾಡುವ ಮದ್ದು ಕಹಿಯಾಗಿದ್ದರೂ ವರ್ಷಕ್ಕೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ಪ್ರತಿಯೊಂದು ಗೊಂಚಲಲ್ಲೂ ಏಳು ಎಲೆಗಳು ತುಂಬಿರುವುದರಿಂದ ಇದನ್ನು ಸಪ್ತಪರ್ಣಿ ಮರ ಎಂದು ಕರೆಯುತ್ತಾರೆ. ಹಾಗೆನೇ ಇದರ ಹೂವು ಹಸಿರು ಬಣ್ಣವನ್ನು ಹೊಂದಿದೆ. ಕಾಯಿ 0.33-0.66ನಷ್ಟು ಉದ್ದವಾಗಿದೆ. ಇದರ ಬೀಜ ಬಿಳಿಯಾಗಿದ್ದು, ಹಸಿರು ಬಣ್ಣವನ್ನು ಹೊಂದಿದೆ.

ಕಷಾಯ ಮಾಡುವ ವಿಧಾನ ಹೇಗೆ :

ಸೂರ್ಯ ಉದಯವಾಗುವ ಮುಂಚೆ ಎದ್ದು, ಹಾಳೆ(ಪಾಲೆ) ಮರದ ತೊಗಟೆಯನ್ನು ತರಬೇಕು. ಓಮ, ಬೆಳ್ಳುಳ್ಳಿ, ಅರಶಿನ, ಕರಿ ಮೆಣಸು ಹಾಕಿ ಅರೆಯುವ ಕಲ್ಲಿನಿಂದ ಅರೆದು ರಸ ತೆಗೆಯುತ್ತಾರೆ. ಇವುಗಳನ್ನು ಬೆರೆಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಂತರ ಬಿಳಿ ಕಲ್ಲನ್ನು ಕೆಂಡಕ್ಕೆ ಹಾಕಿ ಬಿಸಿ ಮಾಡಿ ಹಾಳೆ ಮರದದದಿಂದ ತಯಾರಿಸಿದ ಕಷಾಯಕ್ಕೆ ಹಾಕಿ ಮುಚ್ಚುತ್ತಾರೆ. ನಂತರ ಬರೀ ಹೊಟ್ಟೆಗೆ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಕಷಾಯ ಕುಡಿಸುತ್ತಾರೆ. ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ ಅದನ್ನು, ಸಮತೋಲಿನಗೊಳಿಸಲು ಕಷಾಯ ಸೇವಿಸಿದ ನಂತರ ಮೆಂತ್ಯೆ ಗಂಜಿಯನ್ನು ಸೇವಿಸುತ್ತಾರೆ. ಇನ್ನು ಹಲವು ಕಡೆ ಕೆಸುವಿನ ಎಲೆಯಿಂದ ಮಾಡಿದ ಪತ್ರೋಡೆಯನ್ನು ತಿನ್ನುತ್ತಾರೆ.

ಇನ್ನು, ಜನಪದ ಸಂಶೋಧನಾ ಕೇಂದ್ರದ ಸಂಶೋಧನೆಯ ಅಮವಾಸ್ಯೆಯ ದಿನದಂದು ಸಂಗ್ರಹಿಸಿದ ತಿಳಿ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲವೊನೈಡ್​ ಎಂಬ ಪದಾರ್ಥವಿದೆ ಎಂದು ಸಾಬೀತಾಗಿದೆ. ಸಂಗ್ರಹಿಸಿದ ರಸವು ನೈಸರ್ಗಿಕ ಸ್ಟೀರಾಯ್ಡ್​ಗಳು ಮತ್ತು ಟೆರ್ಪಿನಾಯ್ಡ್​ಗಳನ್ನು ಹೊಂದಿರುವುದರ ಜೊತೆಗೆ, ರಸದ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಗೆ ರಾಮಬಾಣವಾಗಿದೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಸಂಪ್ರದಾಯವನ್ನು ಉಳಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರಬೇಕು. ಹಳ್ಳಿ ಸೊಗಡಿನ ಆಚಾರ-ವಿಚಾರಗಳು ನಶಿಸಿಹೋಗದಂತೆ ಕಾಪಾಡಬೇಕು.

RELATED ARTICLES

Related Articles

TRENDING ARTICLES