ಬೆಂಗಳೂರು: ರಾಜಕಾರಣಿಗಳು ನಾವು ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪುತ್ತೂರು ತಾಲೂಕಿನಲ್ಲಿ ಯುವಕನ ಹತ್ಯೆಯಾಗಿದೆ. ಇದು ಅತ್ಯಂತ ಖಂಡನೀಯ ಘಟನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಹೇಳ್ತೀನಿ ಹಾಗೂ ಎಲ್ಲಾ ಪಕ್ಷಗಳಿಗೂ ಹೇಳ್ತೀನಿ. ಯಾವುದೇ ಸಮಾಜದ ಸಂಘಟನೆ ಇರಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಿ. ಆ ತಾಯಿ ನನ್ನ ಮಗನ ಜೀವ ಕೊಡಿ ಅಂತಿದ್ದಾರೆ. ಹೀಗಾಗಿ ನಾವು ರಾಜಕಾರಣಿಗಳಾಗಿ ಆ ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು. ಸಾವಿನ ನಂತರ ಸಾಂತ್ವಾನ, ಪರಿಹಾರ ಕೊಡೋದ್ರಿಂದ ಮತ್ತೆ ಜೀವ ವಾಪಸ್ ತರಲು ಆಗಲ್ಲ ಎಂದರು.
ಇನ್ನು ಬಿಜೆಪಿ ಸರ್ಕಾರ ಇದ್ದಾಗ ಈ ಘಟನೆ ಕಾಣ್ತಾ ಇದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು. ರಾಜಕಾರಣಿಗಳ, ಶ್ರೀಮಂತರ ಸಾವು ಆಗಲ್ಲ ಆದರೆ ಅಮಾಯಕರು ಬಲಿ ಆಗ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಆದಾಗ ಸರ್ಕಾರವೇ ಆ ಕುಟುಂಬದ ಮನೆಗೆ ಹೋಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಾದ ನಂತರ ಸರಣಿ ಸಾವು ಆಗ್ತಾ ಇದ್ದಾವೆ. ಬಡತನದ ರೇಖೆಯಿಂದ ಹಿಂದುಳಿದವರ ಸಾವಾಗುತ್ತಿದೆ ಎಂದು ಕಿಡಿಕಾಡಿದರು.