ಬೆಂಗಳೂರು: ಇನ್ನೆನು ಜುಲೈ ಕಳೆದು ಆಗಸ್ಟ್ ತಿಂಗಳು ಹತ್ತಿರವಾಗ್ತಿದೆ. ದೇಶದ ಜನರು ಸ್ವಾತಂತ್ರ್ಯ ದಿನವನ್ನ ಅದ್ದೂರಿಯಾಗಿ ಆಚರಿಸಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಆಜಾದಿ ಕಾ ಅಮೃತ್ ದಿವಸದ ಅಂಗವಾಗಿ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಮನೆ ಮನೆಗೂ ರಾಷ್ಟ್ರಧ್ವಜ ತಲುಪಿಸಲು ಪಾಲಿಕೆ ಸಜ್ಜಾಗಿದೆ.
ಆಗಸ್ಟ್ ಬಂತು ಅಂದ್ರೆ ಅದು ದೇಶದ ಜನರಿಗೆ ಒಂದು ಸಂಭ್ರಮದ ತಿಂಗಳೇ ಸರಿ. ಬ್ರಿಟೀಷರ ಕಪಿಮುಷ್ಟಿಯಿಂದ ಭಾರತಮಾತೆ ಬಿಡುಗಡೆಯಾದ ಆ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುವ ಮೂಲಕ ಭಾರತೀಯರು ಸಂಭ್ರಮಿಸ್ತಾರೆ. ಈ ವರ್ಷ ರಾಜ್ಯದಲ್ಲಿ ಆಗಸ್ಟ್ 11 ರಿಂದ 17 ರವರೆಗೆ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಮಾಡಲು ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ‘ಹರ್ ಘರ್ ತಿರಂಗ್’ ಅಭಿಯಾನಕ್ಕೆ ಬಿಬಿಎಂಪಿ ಕೂಡ ಕೈ ಜೋಡಿಸಲು ಸಜ್ಜಾಗಿದೆ.
ಆಗಸ್ಟ್ 11 ರಿಂದ 17 ರತನಕ ಎಲ್ಲಾ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಎಡಿಜಿಪಿ ಸಂದೀಪ್ ಪಾಟೀಲ್ ಮಾಹಿತಿ ಹಂಚಿಕೊಂಡಿರೋದು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಸಭೆ ನಡೆಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ಚರ್ಚಿಸಲಾಗಿದೆ ಎಂದಿರೋ ತುಷಾರ್, ದೊಡ್ಡ ಧ್ವಜಕ್ಕೆ 25 ರೂಪಾಯಿ, ಚಿಕ್ಕಧ್ವಜಕ್ಕೆ 10 ರೂಪಾಯಿ ನಿಗದಿ ಮಾಡಿದೆ. ಬೆಂಗಳೂರಲ್ಲಿ ಈ ಬಾರಿ 10 ಲಕ್ಷ ಧ್ವಜಾರೋಹಣ ಮಾಡಲು ಟಾರ್ಗೆಟ್ ಇಟ್ಟುಕೊಂಡಿದ್ದು, ಸದ್ಯ 2 ಲಕ್ಷ ತಿರಂಗ ತಲುಪಿದೆ ಅಂತಾ BBMP ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇನ್ನು ಈ ಬಾರಿ ಪಾಲಿಸ್ಟರ್ ಧ್ವಜಗಳ ಬಳಕೆಯೂ ಅನಿವಾರ್ಯವಾಗಲಿದ್ದು, ಪ್ರತಿ ಮನೆ ಮನೆಯಲ್ಲೂ ತಿರಂಗ ಧ್ವಜ ಹಾರಾಡುವ ನಿರೀಕ್ಷೆಯಿದೆ. ಇತ್ತ ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರೋತ್ಸವ ಆಚರಣೆ ಬಗ್ಗೆ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೇ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದ್ದು, ವಾರ್ಡ್ ಇಂಜಿನಿಯರ್ಸ್ ಎಆರ್ಒಗಳು ಬೆಂಗಳೂರಿನ ಗಲ್ಲಿ ಗಲ್ಲಿಗೂ ಹೋಗಿ ಧ್ವಜಾರೋಹಣದ ಬಗ್ಗೆ ಅರಿವು ಮೂಡಿಸಲು ಸಜ್ಜಾಗಿದ್ದಾರೆ.
ಇನ್ನು ಜನರು ಹೇಗೆ ಧ್ವಜ ಹಾರಿಸಬೇಕು ಅನ್ನೋ ಬಗ್ಗೆ ಕೂಡ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳ ತಂಡ ಸಜ್ಜಾಗಿದೆ. ಒಟ್ಟಾರೆ ದೇಶದ ಸ್ವಾತಂತ್ರ್ಯ ಸಂಭ್ರಮಕ್ಕೆ ರಾಜಧಾನಿಯಲ್ಲಿ ಈಗಿಂದಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ಸ್ವಾತಂತ್ರ್ಯ ದಿನ ಆಚರಣೆಗೆ ರಾಜಧಾನಿ ಸಜ್ಜಾಗ್ತಿದೆ.
ಕ್ಯಾಮರಾ ಮ್ಯಾನ್ ಮಂಜುನಾಥ್ ಜೊತೆ ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು