ಬೆಂಗಳೂರು : ಸಿಎಂ ಆದ ಒಂದು ವರ್ಷದ ಅವಧಿಯಲ್ಲಿ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವ ಯೋಜನೆ ತಂದಿದ್ದಾರೆ? ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಈ ರಾಜ್ಯದ ಸಿಎಂ ಆಗಿ ನಾಳೆಗೆ ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಮಾಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಆದರೆ ಈ ಸಮಾವೇಶ ಸರ್ಕಾರದ ಯಾವ ಸಾಧನೆಗಾಗಿ? ಗುತ್ತಿಗೆದಾರರಿಂದ 40% ಕಮೀಷನ್ ಪಡೆದಿದ್ದಕ್ಕೋ? ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದಕ್ಕೋ? ಅಥವಾ ಈಶ್ವರಪ್ಪರಿಗೆ ‘ಬಿ ರಿಪೋರ್ಟ್’ ಕೊಡಿಸಿದಕ್ಕೋ? ಬೊಮ್ಮಾಯಿಯವರ ಒಂದು ವರ್ಷದ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಎಂದು ಕಿಡಿಕಾಡಿದ್ದಾರೆ.
ಇನ್ನು, PSI ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ನಡೆಸಿದಕ್ಕೆ ಈ ಸಮಾವೇಶವೇ? ಬೊಮ್ಮಾಯಿಯವರು ಸಾಧನಾ ಸಮಾವೇಶ ಮಾಡುವ ಬದಲು ಹಗರಣದ ಸಮಾವೇಶ ನಡೆಸುವುದು ಸೂಕ್ತವಲ್ಲವೇ? ಹಗರಣದಿಂದಲೇ ಕುಖ್ಯಾತಿ ಗಳಿಸಿರುವ ಈ ಸರ್ಕಾರ ಯಾವ ಮುಖ ಇಟ್ಟುಕೊಂಡು ಸಾಧನೆಯ ಮಾತಾನಾಡುತ್ತಿದೆ? ಸಿಎಂ ಆದ ಒಂದು ವರ್ಷದ ಅವಧಿಯಲ್ಲಿ ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವ ಯೋಜನೆ ತಂದಿದ್ದಾರೆ? ಹೋಗಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ? ಕ್ರಿಯೆಗೆ ಪ್ರತಿಕ್ರಿಯೆ ಇರಲಿದೆ ಎಂದು ಕೋಮುಗಲಭೆಗೆ ಪ್ರಚೋದಿಸಿ ಸಮಾಜ ಒಡೆದಿದ್ದು ಬೊಮ್ಮಾಯಿಯವರ ಸಾಧನೆಯೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಜಿಎಸ್‌ಟಿ ಬಾಕಿ ಕೊಡದೆ ಸತಾಯಿಸುತ್ತಿದೆ. ಬೊಮ್ಮಾಯಿಯವರು ಎಷ್ಟು ಬಾರಿ ಕೇಂದ್ರದ ಬಳಿ ಜಿಎಸ್‌ಟಿ ಬಾಕಿ ಕೇಳಿದ್ದಾರೆ? ತಿಂಗಳಿಗೊಮ್ಮೆ ದೆಹಲಿ ಟ್ರಿಪ್ ಹೋಗುವ ಬೊಮ್ಮಾಯಿಯವರು ಒಂದೇ ಒಂದು ಸಾರಿಯಾದರೂ ಕೇಂದ್ರದಿಂದ ಆಗುತ್ತಿರುವ ಜಿಎಸ್‌ಟಿ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆಯೆ? ನಾಳೆಯ ಸಮಾವೇಶ ಯಾವ ಸಾಧನೆಗಾಗಿ? ಬೊಮ್ಮಾಯಿ ಸಿಎಂ ಆದಾಗ ಜನರಿಗೆ ಒಂದಷ್ಟು ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲಾ ಒಡೆದ ಬಲೂನ್‌ಗಳಾಗಿವೆ. ಚುರುಕಿಲ್ಲದ ಆಡಳಿತ ಯಂತ್ರ, ವಿಲೇವಾರಿಯಾಗದ ಕಡತಗಳು, ಗುತ್ತಿಗೆದಾರರಿಗೆ ಬಿಡುಗಡೆಯಾಗದ ಬಿಲ್‌ಗಳು, ನೆರೆ ಪರಿಹಾರದಲ್ಲಿನ ಲೋಪ ಬೊಮ್ಮಾಯಿ ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರವನ್ನ ಪ್ರಶ್ನಿಸಿದ್ದಾರೆ.