ಅದು ಆಪರೇಷನ್ ಜೆಡಿಎಸ್ ತಂದ ಸಾವು. ಆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು.ಒಂದು ದಿನ ಕಳೆದಿದ್ರೂ ಆತ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಗೆ ಮತ ಹಾಕುತ್ತಿದ್ದ. 20 ದಿನ ರಾಜ್ಯವ್ಯಾಪಿ ಟ್ರಿಪ್ ಮಾಡಿಕೊಂಡು ಬಂದ 11ಜನ ಗ್ರಾ.ಪಂ.ಸದಸ್ಯರ ಪೈಕಿ ಆತ ಮಾತ್ರ ಸಾವನಪ್ಪಿದ್ದಾನೆ. ಮೃತದೇಹದ ಮೇಲೆ ಒಂದು ಎಳೆ ಬಟ್ಟೆಯೂ ಇರಲಿಲ್ಲ ಎಂಬುದು ಗಮನಾರ್ಹ.
ಗ್ರಾಮ ಪಂಚಾಯ್ತಿಗೂ ರೆಸಾರ್ಟ್ ರಾಜಕಾರಣ ಆವರಿಸಿದೆ. ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ 10 ಸಹಸದಸ್ಯರೊಂದಿಗೆ ಮೈಸೂರಿನ RT ನಗರದ ಸುಭೀಕ್ಷಾ ಗಾರ್ಡನ್ಸ್ ರೆಸಾರ್ಟ್‌ಗೆ ಹೋಗಿದ್ದ ಕೆ.ಆರ್. ತಾಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ಸದಸ್ಯ ಗ್ರಾ.ಪಂ.ಸದಸ್ಯ ಸತೀಶ್ ನಿಗೂಢ ರೀತಿ ಸಾವಿಗೀಡಾಗಿದ್ದಾರೆ. ರೆಸಾರ್ಟ್‌ನಲ್ಲೇ ಅವರ ಮೃತದೇಹ ನಗ್ನವಾಗಿ ಪತ್ತೆಯಾಗಿದೆ.ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಆಕಾಂಕ್ಷಿ JDSನ ದಿನೇಶ್ ಎಂಬಾತ ಸತೀಶ್ ಸೇರಿ ಎಲ್ಲಾ ಸದಸ್ಯರನ್ನು ರೆಸಾರ್ಟ್‌ಗೆ ಕಳುಹಿಸಿದ್ದರು ಎನ್ನಲಾಗಿದೆ. 20 ದಿನಗಳಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳ ಭೇಟಿ ಬಳಿಕ ಸೋಮವಾರ ಜೆಡಿಎಸ್ ಮುಖಂಡರಿಗೆ ಸೇರಿದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಭರ್ಜರಿ ಪಾರ್ಟಿ ಬಳಿಕ ಎಲ್ಲರೂ ಊಟ ಮುಗಿಸಿ ಮಲಗಿದ್ದರು. ಆದರೆ, ಮುಂಜಾನೇ ವೇಳೆಗೆ ಸತೀಶ್ ಎದೆ ನೋವು ಎಂದು ಕಿರುಚಾಡಿ ಮಂಚದಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಇಷ್ಟಾದ್ರೂ ಸಹ ಸತೀಶನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಯಾರೂ ಮಾಡಿಲ್ಲ ಎನ್ನಲಾಗಿದೆ.
ಇನ್ನೂ ಸತೀಶ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಮೈಸೂರಿಗೆ ಆಗಮಿಸಿದ ಕುಟುಂಬಸ್ಥರು ಸತೀಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಕಳೆದ 20 ದಿನಗಳಿಂದ ಸತೀಶ್ ಜೊತೆ ಪ್ರವಾಸದಲ್ಲಿದ್ದವರ ವಿರುದ್ಧ ಕೆಂಡಕಾರಿದ್ರು. ಸಾವಿಗೆ ನಿಖರ ಕಾರಣ ಗೊತ್ತಾಗಬೇಕು. ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಒಟ್ಟಾರೆ ಗ್ರಾಮ ಪಂಚಾಯತಿ ಸದಸ್ಯನ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ರೆಸಾರ್ಟ್ ರಾಜಕಾರಣಕ್ಕೆ ಸದಸ್ಯನ ಪ್ರಾಣ ಹೋಗಿದ್ದಂತೂ ದುರಂತ.
ಕ್ಯಾಮರಾ ಮನ್ ಹರೀಶ್ ಜೊತೆ ಸುರೇಶ್ ಬಿ ಪವರ್ ಟಿವಿ ಮೈಸೂರು