ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ನೆಪದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಖಂಡಿಸಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಮಂಗಳವಾರ ಮೌನ ಸತ್ಯಾಗ್ರಹ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮುಖಂಡರಾದ ವೀರಪ್ಪ ಮೊಯಿಲಿ, ಎಐಸಿಸಿ ಕಾರ್ಯದರ್ಶಿಗಳಾದ ಮಯೂರ್ ಜೈಕುಮಾರ್, ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಆರ್. ಧ್ರುವನಾರಾಯಣ್, ಶಾಸಕರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ, ಪುಟ್ಟರಂಗಶೆಟ್ಟಿ ಇದ್ದರು.
ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಅವರು ಮಾಸ್ಕ್ ಧರಿಸಿಕೊಂಡು, ಕೈಗೆ ಡ್ರಿಪ್ಸ್ ಹಾಕಿಕೊಂಡೇ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಲು ನಿರಾಕರಿಸಿದ ಅವರು, ಕೆಲಹೊತ್ತಿನ ಬಳಿಕ ವಿಶ್ರಾಂತಿಗಾಗಿ ತಮ್ಮ ನಿವಾಸಕ್ಕೆ ತೆರಳಿದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರ ಬಿಜೆಪಿಯವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೇವಲ ವಿರೋಧ ಪಕ್ಷಗಳ ಮೇಲೆ ಮಾತ್ರ ಕಣ್ಣು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ 50 ಗಂಟೆ ವಿಚಾರಣೆ ಎದುರಿಸಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ಈಗಾಗಲೇ ಮೂರು ಗಂಟೆ ವಿಚಾರಣೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನೂ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಅವರು (ಬಿಜೆಪಿಯವರು) ಯಾರನ್ನು ತಾನೇ ಬಿಟ್ಟಿದ್ದಾರೆ’ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.