ಬಳ್ಳಾರಿ : ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಪಡಿತರ ದಂಧೆಯ ಬಗ್ಗೆ ಪವರ್ ಟಿವಿಯಲ್ಲಿ ಸ್ಟಿಂಗ್ ಅಪರೇಷನ್ ನಡೆಸಿದ ಬಳಿಕ ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಅಕ್ರಮ ಪಡಿತರ ದಂಧೆ ಕೇಸ್‌ಗಳು ಒಂದೊಂದಾಗಿಯೇ ಹೊರಬರುತ್ತಿವೆ. ಆದರೆ, ಈಗ ಕಂಪ್ಲಿಯಲ್ಲಿ ನಡೆದ ಅಕ್ರಮ ಪಡಿತರ ಕೇಸ್ ಗಣಿನಾಡಿನಲ್ಲಿ ರಾಜಕೀಯ ಬಣ್ಣ ಪಡೆದುಕೊಂಡಿವೆ.
ಬಳ್ಳಾರಿ ಜಿಲ್ಲೆ ಕಂಪ್ಲಿಯ ಹೊರವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಶೆಡ್ ಗೋದಾಮು ಮೇಲೆ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ದಾಳಿ ನಡೆಸಿದ್ದರು. ಈ ವೇಳೆ ಸಾವಿರಾರು ಚೀಲ ಅನ್ನಭಾಗ್ಯ ಅಕ್ಕಿ,ಜೋಳ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇನ್ನೂ ಈ ಸಂಬಂಧ ಆಹಾರ ಇಲಾಖೆ ಅಧಿಕಾರಿ ನಾಗರಾಜ್ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ದೂರು ನೀಡಿದ್ದಾರೆ. ಆದರೆ, ಈ ಪ್ರಕರಣ ಈಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಕಂಪ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾರಾಯಣಪ್ಪ ಕೂಡ ಆರೋಪಿಯಾಗಿದ್ದಾರೆ. ಜೊತೆಗೆ ಬಿಜೆಪಿಯ ಇಬ್ಬರು ಮುಖಂಡರು ಕೂಡ ಆರೋಪಿಗಳಾಗಿದ್ದಾರೆ. ಆದರೆ, ಈ ಪ್ರಕರಣದ ಆರೋಪಿಯಾಗಿರುವ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಾರಾಯಣಪ್ಪ ಈಗ ಶಾಸಕ ಗಣೇಶ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಂಗನವಾಡಿ ಮಕ್ಕಳಿಗೆ ಕೊಡುವ ಆಹಾರದಲ್ಲಿ ಪ್ರತಿ ತಿಂಗಳೂ 10 ಲಕ್ಷ ಶಾಸಕರು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾರಾಯಣಪ್ಪ ಹಾಗೂ ಜೆ.ಎನ್.ಗಣೇಶ್ ಇಬ್ಬರೂ ಕೂಡ ಕಾಂಗ್ರೆಸ್ ಪಕ್ಷದವರೇ. ಆದರೆ, ಈಗ ನಾರಾಯಣಪ್ಪ ಕೂಡ ಕಂಪ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಪ್ರವಾಸ ಮಾಡುತ್ತಿದ್ದಾರೆ. ಇದೇ ವಿಚಾರ ಈಗ ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತಿದೆ. ಈತ್ತ ಕಂಪ್ಲಿ ಠಾಣೆಯ ಪೊಲೀಸರು ಹತ್ತು ಜನರ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದು,ಈ ಪೈಕಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು,ತನಿಖೆ ಮುಂದುವರಿಸಿದ್ದಾರೆ.
ಬಡವರಿಗೆ ಸೇರಬೇಕಾಗಿದ್ದ ಪಡಿತರ ಅಕ್ರಮವಾಗಿ ದಂಧೆಕೋರರ ಪಾಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ. ಆದರೆ, ಈ ಪ್ರಕರಣ ಕೂಡ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ದುರಂತವೇ ಸರಿ.
ಕ್ಯಾಮರಾಮ್ಯಾನ್ ಶಿವು ಜೊತೆ ಬಸವರಾಜ ಹರನಹಳ್ಳಿ ಪವರ್ ಟಿವಿ, ಬಳ್ಳಾರಿ