Wednesday, January 22, 2025

ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾತ; 22 ವರ್ಷದ ಯುವಕ ಸಾವು

ತಮಿಳುನಾಡು: ರಾಷ್ಟ್ರಮಟ್ಟದಲ್ಲಿ ಅರಳಬೇಕಿದ್ದ ಪ್ರತಿಭೆ. ಆಟಕ್ಕಿಳಿದ್ರೆ, ಎದುರಾಳಿಗಳು ಮುಟ್ಟೋಕು ನೋಡ್ತಾ ಇದ್ದರು ಆದ್ರೆ, ಮೈದಾನದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ನಡೆದಿದೆ.

ಇತ್ತೀಚೆಗಂತೂ ಸಾವು ಹೇಗೆ ಬರುತ್ತೆ..? ಯಾವಾಗ ಬರುತ್ತೆ, ಯಾವ ರೂಪದಲ್ಲಿ ಬರುತ್ತೆ ಅಂತ ಹೇಳೋದಕ್ಕೆ ಆಗೋದೇ ಇಲ್ಲ. ಆದ್ರೆ, ಒಮ್ಮೊಮ್ಮೆ ಅಚ್ಚರಿಯ ರೀತಿಯಲ್ಲಿ ಪ್ರಾಣ ತೆಗೆದುಕೊಂಡೇ ಹೋಗಿಬಿಡ್ತಾನೆ ಯಮರಾಯ.. ಅಂತಹದ್ದೇ ಸ್ಟೋರಿ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

ಕಬಡ್ಡಿ ಪಂದ್ಯಾವಳಿಯ ವೇಳೆ ಯುವ ಆಟಗಾರನೊಬ್ಬ ಮೈದಾನದಲ್ಲೇ ಅಸುನೀಗಿದ ಘಟನೆ ಚೆನ್ನೈ ಸಮೀಪದ ಕಡಲೂರಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಡಲೂರಿನ ಮಂಡಿಕುಪ್ಪಂನಲ್ಲಿ ಕಬಡ್ಡಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮುರುಟ್ಟು ಕಾಳೈ ತಂಡದ ಪರ ಆಡುತ್ತಿದ್ದ 22ರ ಹರೆಯದ ವಿಮಲ್​ರಾಜ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮೃತ ವಿಮಲ್‌ರಾಜ್ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ. ಕಡಲೂರು ಜಿಲ್ಲೆಯ ಕಡಂಪುಲಿಯೂರು ಸಮೀಪದ ಪುರಂಗಿಣಿ ಗ್ರಾಮದ ವಿಮಲ್‌ರಾಜ್ ಮಂಡಿಕುಪ್ಪಂನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳೈ ತಂಡದ ಪರ ಕಣಕ್ಕಿಳಿದಿದ್ದರು. ರೈಡಿಂಗ್ ಮುಗಿಸಿ ಗೆರೆ ಮುಟ್ಟಲು ವಾಪಸ್ ಆಗುವ ವೇಳೆ ಎದುರಾಳಿ ತಂಡದ ಆಟಗಾರನ ಮೊಣಕಾಲು ಎದೆಯ ಭಾಗಕ್ಕೆ ಜೋರಾಗಿ ತಾಗಿದೆ.

ಇದರಿಂದ ಅಸ್ವಸ್ಥರಾದ ವಿಮಲ್​ ರಾಜ್ ಅವರನ್ನು ತಕ್ಷಣವೇ ಪನ್ರುತಿಯ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯದಲ್ಲೇ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ.

ಗೆಳೆಯನ ಅಗಲಿಕೆಯ ನೋವಿನ ನಡುವೆ ಮೈದಾನಕ್ಕಿಳಿದ ಮುರುಟ್ಟು ಕಾಳೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ. ವಿಮಲ್‌ರಾಜ್‌ಗೆ ಹೃದಯಸ್ತಂಭನವಾಗಿರಬಹುದು ಎನ್ನಲಾಗಿದೆ. ಅಷ್ಟೇ ಅಲ್ಲದೆ ಗೆದ್ದ ಟ್ರೋಫಿಯೊಂದಿಗೆ ವಿಮಲ್ ರಾಜ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.

ಬ್ಯೂರೋ ರಿಪೋರ್ಟ್‌ ಪವರ್‌ ಟಿವಿ

RELATED ARTICLES

Related Articles

TRENDING ARTICLES