Saturday, November 2, 2024

ಜಮೀರ್ ಬಾಯಿಗೆ ಬೀಗ ಹಾಕಿಸುವಲ್ಲಿ ಡಿಕೆಶಿ ಸಕ್ಸಸ್

ಕನಕಪುರ ಬಂಡೆ ಹಾಗು ಜಮೀರ್ ನಡುವೆ ಸ್ಪೋಟವಾಗಿದ್ದ ಭಿನ್ನಮತ ತಣ್ಣಗಾಗಿಸಲು ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ. ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡುತ್ತಿದ್ದ ಜಮೀರ್ ಬಾಯಿಗೆ ಕೊನೆಗೂ ಎಐಸಿಸಿ ಬೀಗ ಹಾಕಿದೆ. ಪಕ್ಷದ ಲಕ್ಷ್ಮಣ ರೇಖೆ ದಾಟದಂತೆ ಹೈಕಮಾಂಡ್ ಖಡಕ್ ವಾರ್ನಿಂಗ್ ನೀಡಿದೆ‌. ಇದು ಎಐಸಿಸಿ ಹಂತದಲ್ಲಿ ಟಗರು ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗ್ತಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರಾಗ್ಬೇಕೆಂಬ ಚರ್ಚೆ ಮತ್ತೆ ಶುರುವಾಗಿತ್ತು‌. ಸಿದ್ದು-ಡಿಕೆಶಿ ನಡುವಿನ ಫೈಟ್ ಆಪ್ತ ಬಳಗಕ್ಕೆ ವರ್ಗಾವಣೆಯಾಗಿತ್ತು. ಸಿದ್ದು ಪರಮಾಪ್ತ ಜಮೀರ್ ಪದೇ ಪದೇ ಸಿದ್ರಾಮಯ್ಯ ನಮ್ಮ ಸಿಎಂ ಅಂತ ಹೇಳ್ತಾನೇ ಇದ್ರು. ಇದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯ ಕೋಪಕ್ಕೆ ಗುರಿಯಾಗಿತ್ತು. ವ್ಯಕ್ತಿ ಪೂಜೆ ಬೇಡ.. ಪಕ್ಷ ಪೂಜೆ ಮಾಡಿ ಅಂತ ಡಿಕೆ ವಾರ್ನಿಂಗ್ ಮಾಡ್ತಾನೇ ಇದ್ರು. ಆದ್ರೂ, ಜಮೀರ್ ಮಾತ್ರ ಇದಕ್ಕೆ ಡೋಂಟ್‌ಕೇರ್ ಅಂದಿದ್ರು. ಯಾವಾಗ ಡಿಕೆಶಿಯೇ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಿಸಿದ್ರೋ ಅದಕ್ಕೆ ಮತ್ತೆ ಜಮೀರ್ ಅಲ್ಪಸಂಖ್ಯಾತ ಸಮುದಾಯವನ್ನು ಎಳೆದು ತಂದಿದ್ರು. ಇದು ರಾಜ್ಯ ಒಕ್ಕಲಿಗ ಸಮುದಾಯದ ಮುಖಂಡರ ಅವಕೃಪೆಗೆ ಕಾರಣವಾಗಿತ್ತು. ಜಮೀರ್ ಮೇಲೆ ಹೈಕಮಾಂಡ್‌ಗೆ ದೂರು‌ ಕೂಡ ರವಾನೆಯಾಗಿತ್ತು. ಇದನ್ನ ಹೀಗೆ ಬಿಟ್ರೆ ಬಂದ ಅವಕಾಶ ಕಳೆದುಕೊಳ್ಬೇಕಾಗುತ್ತೆಂಬ ನಿಟ್ಟಿನಲ್ಲಿ‌ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಜಮೀರ್ ಅಹಮದ್ ಖಾನ್‌ಗೆ ಖಡಕ್ ವಾರ್ನಿಂಗ್ ನೀಡಿರುವ ಸುರ್ಜೇವಾಲಾ, ಪಕ್ಷದ ಲಕ್ಷ್ಮಣ ರೇಖೆ ದಾಟಬೇಡಿ. ಪಕ್ಷದ ಇತಿಮಿತಿಯಲ್ಲಿ ಮಾತನಾಡಿ ಎಂದಿದ್ದಾರೆ‌. ಈ ಮೂಲಕ ಸಿದ್ದು ಬಣಕ್ಕೆ ಎಐಸಿಸಿ ಹಂತದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಆಪ್ತನ ನೋಟಿಸ್‌ನಿಂದ ಸಿದ್ದರಾಮಯ್ಯಗೆ ಮುಜುಗರ :

ಇನ್ನು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜಮೀರ್ ಅಹ್ಮದ್‌ಗೆ ವಾರ್ನಿಂಗ್ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಹಿನ್ನಡೆಯಾದಂತಾಗಿದೆ. ಯಾಕಂದ್ರೆ ಬೆನ್ನ ಹಿಂದೆ ಸಿದ್ರಾಮಣ್ಣ ಇದ್ದಾರೆ ಅನ್ನೋ ಕಾರಣಕ್ಕೆ ಜಮೀರ್ ಪದೇ ಪದೇ ಡಿಕೆಶಿ ವಿರುದ್ಧ ಟಾಕ್‌ವಾರ್ ಮುಂದುವರೆಸಿದ್ರು. ಆದ್ರೆ, ಒಕ್ಕಲಿಗ ಸಮುದಾಯದ ವಿಚಾರದಲ್ಲಿ ಹೈಕಮಾಂಡ್ ಕೋಪಕ್ಕೆ ಗುರಿಯಾದ್ರು. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜಮೀರ್ ಗೆ ದೂರವಾಣಿ ಕರೆ ಮಾಡಿ ವಾರ್ನಿಂಗ್ ಮಾಡಿದ್ರು. ಹಾಗಾಗಿ, ಜಮೀರ್ ಬಾಯಿಗೆ ಬೀಗ ಹಾಕಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ. ಆದ್ರೆ, ತಮ್ಮ ಆಪ್ತನನ್ನು ರಕ್ಷಿಸುವಲ್ಲಿ ಸಿದ್ರಾಮಯ್ಯ ಸದ್ಯಕ್ಕೆ ವಿಫಲರಾಗಿದ್ದಾರೆ.

ಹೈಕಮಾಂಡ್ ವಾರ್ನಿಂಗ್ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿರುವ ಜಮೀರ್ ಅಹ್ಮದ್ ಖಾನ್, ನನ್ಗೆ ಯಾವ್ ನೋಟಿಸ್ ಬಂದಿಲ್ಲ. ಪತ್ರ ಬಂದಿದೆ ಅಷ್ಟೆ. ಕೆಪಿಸಿಸಿ ಅಧ್ಯಕ್ಷರು ತುಂಬಾ ಡೊಡ್ಡವರು ಎಂದು ಡಿಕೆಶಿಗೆ ಮತ್ತೆ ಕುಟುಕಿದ್ದಾರೆ.

ಇನ್ನು ಜಮೀರ್‌ಗೆ ಹೈಕಮಾಂಡ್ ನೀಡಿರುವ ವಾರ್ನಿಂಗ್ ಬಗ್ಗೆ ಕಾಂಗ್ರೆಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ.

ಒಟ್ಟಾರೆ, ಸಿಎಂ ಕುರ್ಚಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಪಕ್ಷದಲ್ಲಿ ಸ್ಫೋಟವಾಗಿದ್ದ ಬಣ ಬಡಿದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕಿದೆ‌. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಗೋವಿಂದ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES