ಶಿವಮೊಗ್ಗ: ಆ ಕಾಲೇಜಿನ ಆ ಮೂವರು ವಿದ್ಯಾರ್ಥಿಗಳು ನಶೆಯ ಗುಂಗಿನಲ್ಲಿ ತೇಲಾಡುತ್ತಿದ್ರೆ, ಅದೇ ಕಾಲೇಜಿನ ಬಸ್ನಲ್ಲಿ ಸಾಗುತ್ತಿದ್ದ ಇತರೆ ವಿದ್ಯಾರ್ಥಿಗಳು, ಅದನ್ನೇ ವಿಡಿಯೋ ಮಾಡಿಕೊಳ್ತಿದ್ರು. ಇತ್ತ ಕಾಲೇಜು ವಿದ್ಯಾರ್ಥಿಗಳು, ನಶೆಯಲ್ಲಿ ತೇಲಾಡುತ್ತಿದ್ರೆ, ಇತ್ತ ಗಾಂಜಾ ಪೆಡ್ಲರ್ಗಳು, ಗಾಂಜಾ ಸೇವಿಸುವರನ್ನು ಹಿಡಿಯುವ ಪೊಲೀಸ್ಸೇ, ಗಾಂಜಾ ಕೇಸಿನಲ್ಲಿ ಬಂಧಿಯಾಗಿದ್ದಾನೆ. ಆದರೆ, ಇದೇ ಗಾಂಜಾ ಪತ್ತೆ ಪ್ರಕರಣದಲ್ಲೂ ಬಿಗ್ ಟ್ವಿಸ್ಟ್ ಸಿಕ್ಕಿದೆ
ಶಿವಮೊಗ್ಗದ ಖಾಸಗಿ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಗಳು, ಕಾಲೇಜು ಸಮೀಪವೇ ಇರುವ ಬಾರ್ವೊಂದರಲ್ಲಿ ಕಂಠಪೂರ್ತಿ ಕುಡಿದು ತೇಲಾಡುತ್ತಾ, ತೂರಾಡುತ್ತಾ ಕಾಲೇಜು ಹೊರಭಾಗದಲ್ಲಿ ಮದ್ಯ ಸೇವಿಸಿ ಭಾರಿ ಅವಾಂತರ ಸೃಷ್ಟಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಕಾಲೇಜು ವಿದ್ಯಾರ್ಥಿಗಳ ಬಹುತೇಕ ಪೋಷಕರೆಲ್ಲರೂ ತಮ್ಮ ಮಕ್ಕಳಿಗೆ ಮತ್ತೊಮ್ಮೆ ಬುದ್ಧಿವಾದ ಹೇಳುವ ಪ್ರಸಂಗ ಎದುರಾಗಿದೆ. ಹೀಗೆ ನಶೆಯಲ್ಲಿ ತೇಲುತ್ತಿದ್ದ ವಿದ್ಯಾರ್ಥಿಗಳನ್ನು ಒಂದು ವಾರ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಅಷ್ಟೇ ಅಲ್ಲ, ಸಾರ್ವಜನಿಕರು ಈ ವಿದ್ಯಾರ್ಥಿಗಳ ವರ್ತನೆ ಕಂಡು ದಂಗಾಗಿ ಹೋಗಿದ್ದು, ಈ ವರ್ತನೆಗೆ ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆಗಿದ್ದೇ ತಡ, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗತೊಡಗಿದೆ. ಆದರೆ, ಇದರ ನಡುವೆಯೇ, ಪೊಲೀಸರೊಬ್ಬರು ಗಾಂಜಾ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಗಾಂಜಾ ಸಾಗಾಟ, ಮಾರಾಟದಲ್ಲಿ ಇದುವರೆಗೆ ಕ್ರಿಮಿನಲ್ ಗಳು ಮಾತ್ರ ಭಾಗವಹಿಸುತ್ತಿದ್ದರು. ಆದರೆ ಕಳೆದ ಮೂರು ದಿನದ ಹಿಂದೆ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಖಾಸಗಿ ಬಸ್ ನಲ್ಲಿ 2 ಕೆಜಿ 300 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ. ಕೇರಳ ಮೂಲದ ಅಜೀಲ್ ಎಂಬಾತ ಮಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಎನ್ನಲಾಗಿದೆ.
ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಪೊಲೀಸ್ ಇಲಾಖೆಯೇ ಶಾಕ್ಗೆ ಒಳಗಾಗಿದ್ದು, ತಲೆ ತಗ್ಗಿಸುವಂತಾಗಿದೆ. ಇದರಲ್ಲಿ ಡಿಎಆರ್ ಎಸ್ಐ ನಿಸಾರ್ ಅಲಿಯಾಸ್ ವಿಲ್ಸನ್ ಎಂಬಾತನ ಪ್ರಮುಖ ಪಾತ್ರ ಇದ್ದು, ಈತನ ಸೂಚನೆ ಮೇರೆಗೆ ಅಜೀಲ್ ಗಾಂಜಾ ಸಾಗಿಸುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲದೆ, ಈ ಗಾಂಜಾ ಸಾಗಾಟದ ಪ್ರಕರಣ, ಕೊಲೆಯ ಸಂಚನ್ನು ಕೂಡ ಬಯಲುಗೊಳಿಸಿದೆ. ಅಜೀಲ್‌ನನ್ನು ಗಾಂಜಾ ಕೇಸ್‌ನಲ್ಲಿ ಜೈಲಿಗೆ ಕಳುಹಿಸುವುದು. ಸಜ್ಜು ಪ್ರಾನ್ಸಿಸ್‌ನನ್ನು ಅಪಘಾತ ಮಾಡಿ ಕೊಲೆ ಮಾಡುವುದು PSI ವಿಲ್ಸನ್ ಯೋಚನೆಯಾಗಿತ್ತು. ಅದರಂತೆ ಬೆಂಗಳೂರು ಮೂಲದ ಅಪ್ರೋಜ್ ಅಹಮ್ಮದ್ ಎಂಬಾತನಿಗೆ ಸಜ್ಜು ಫ್ರಾನ್ಸಿಸ್ ಹತ್ಯೆಗೆ 80 ಸಾವಿರಕ್ಕೆ ಸುಫಾರಿ ನೀಡಲಾಗಿತ್ತಂತೆ.
ಒಟ್ಟಿನಲ್ಲಿ ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ, ಅಕ್ರಮ ಗಾಂಜಾ ಸಾಗಾಟ ಅದರಲ್ಲೂ ಪೊಲೀಸ್ ಇಲಾಖೆಯ ಪಿ ಎಸ್.ಐ. ಒಬ್ಬ ತಗಲಾಕಿಕೊಂಡಿರುವುದು, ದುರಂತವೇ ಸರಿ.