Thursday, January 9, 2025

ಸ್ಪಾರ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ : ತಾರಿಹಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಕಿಮ್ಸ್​ನಲ್ಲಿ ತಡರಾತ್ರಿ ಸಾವನ್ನಪ್ಪಿದ್ದು, ಇಂದು ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ಚಿಕಿತ್ಸೆ ಮುಂದುವರೆದಿದೆ. ಗದಗ ಮೂಲದ ವಿಜಯಲಕ್ಷ್ಮಿ, ಕಲಘಟಗಿ ಮೂಲದ ಮಾಲೇಶ ಹಾಗೂ ತಾರಿಹಾಳದ ಗೌರಮ್ಮ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ, ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದರು.

ಅಗ್ನಿ ಅವಘಡದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಭೇಟಿ ನೀಡಿ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಬಳಿಕ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದರು. ಜಿಲ್ಲೆಯಲ್ಲಿರುವ ಅನಧಿಕೃತ ಫ್ಯಾಕ್ಟರಿಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ತಿಳಿಸಿದರು.

ತನಿಖೆ ಕೈಗೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ ಎಂಬುವರನ್ನು ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್​ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಮೂರು ತಂಡಗಳನ್ನ ರಚಿಸಲಾಗಿದೆ. ಮೃತರ ಕುಟುಂಬಸ್ಥರು ಹಾಗೂ ಗಾಯಾಗಳು ಕುಟುಂಬಸ್ಥರು ಫ್ಯಾಕ್ಟರಿ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಚೀಲ ತುಂಬಿಸಿಕೊಳ್ಳುವ ಬರದಲ್ಲಿ ಅಪಾಯದ ಅರಿವು ನೀಡದೆ, ಮುಗ್ಧ ಜೀವಗಳ ಬಲಿ ಪಡೆದ ಫ್ಯಾಕ್ಟರಿ ಮಾಲೀಕನನ್ನ ಶೀಘ್ರವೇ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕಿದೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿನ ಅನಧಿಕೃತ ಫ್ಯಾಕ್ಟರಿಗಳ ಮೇಲೆ ನಿಗಾ ವಹಿಸಬೇಕಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES