ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಟಾಕ್‌ವಾರ್ ಜೋರಾಗ್ತಿದೆ. ಹೈಕಮಾಂಡ್ ಎಚ್ಚರಿಕೆಯ ನಡುವೆಯೂ ನಾಯಕರ ವಾಕ್ಸಮರ ಮುಂದುವರೆದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ನಡೆದಿದ್ದ ಈ ಪ್ರಹಸನ ಈಗ ಅವರ ಆಪ್ತ ಬಳಗಕ್ಕೆ ವರ್ಗಾವಣೆಯಾಗಿದೆ. ಅದ್ರಲ್ಲೂ ಸಿದ್ದರಾಮೋತ್ಸವ ಕಾರ್ಯಕ್ರಮದ ಹಿನ್ನೆಲೆ ಮತ್ತಷ್ಟು ಹೆಚ್ಚಾಗ್ತಿದೆ. ಸಿದ್ದರಾಮಯ್ಯ ಸೈಲೆಂಟಾಗಿದ್ರೂ ತಮ್ಮ ಆಪ್ತ ಶಿಷ್ಯ ಜಮೀರ್ ಎತ್ತಿಕಟ್ಟಿದ್ದಾರೆ. ಹೋದ ಬಂದಲ್ಲೆಲ್ಲಾ ಜಮೀರ್ ಸಾಹೇಬ್ರು ಸಿದ್ದರಾಮಯ್ಯನವರೇ ನಮ್ಮ ಮುಂದಿನ ಮುಖ್ಯಮಂತ್ರಿ ಅಂತಿದ್ದಾರೆ. ಡಿಕೆಶಿ ಪದೇ ಪದೇ ಎಚ್ಚರಿಕೆ ನೀಡಿದ್ರೂ ಜಮೀರ್ ಡೋಂಟ್‌ಕೇರ್ ಎನ್ನುತ್ತಲೇ ಇದ್ದಾರೆ. ಡಿಕೆಶಿ ಅವಾಜ್‌ಗೆ ಮತ್ತೆ ತಿರುಗೇಟು ಕೊಡ್ತಾನೇ ಇದ್ದಾರೆ. ಇಬ್ಬರ ನಡುವೆ ನಡೆದಿರುವ ಈ ಮಾತಿನ ವಾಕ್ಸಮರಕ್ಕೆ ಮತ್ತಷ್ಟು ತುಪ್ಪಸುರಿಯುವ ಕೆಲಸವನ್ನ ರಾಜ್ಯ ನಾಯಕರು ಮಾಡ್ತಿದ್ದಾರೆ.
ಹೈಕಮಾಂಡ್ ಎಚ್ಚರಿಕೆಯ ನಂತ್ರ ಡಿಕೆಶಿ ಮುಂದಿನ ಸಿಎಂ ಎಂಬ ಹೇಳಿಕೆಯನ್ನ ಎಲ್ಲೂ ಕೊಟ್ಟಿರಲಿಲ್ಲ. ಆದ್ರೆ ಮೊನ್ನೆ ಹೆಚ್ಡಿಕೋಟೆ, ರಾಮನಗರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಉತ್ತಮ ಅವಕಾಶವಿದೆ. ಅದನ್ನ ಸರಿಯಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದ್ರು. ಅದಕ್ಕೆ ಜಮೀರ್ ಕೂಡ ಕೌಂಟರ್ ಕೊಟ್ಟರು. ಆದ್ರೆ, ಜಮೀರ್ ಕೌಂಟರ್ ನಿಂದ ಕಾಂಗ್ರೆಸ್ ಒಕ್ಕಲಿಗ ನಾಯಕರಿಗೆ ಅಸಮಾಧಾನವಾಗಿದೆ ಎನ್ನಲಾಗ್ತಿದೆ. ಹೀಗಾಗಿ ಶಾಸಕ ಜಮೀರ್ ಆಪ್ತ, ಒಂದು ಕಾಲದ ಆಪ್ತ ಗೆಳೆಯ ಎನ್.ಚಲುವರಾಯಸ್ವಾಮಿ ಮೂಲಕ ಡಿ.ಕೆ.ಶಿವಕುಮಾರ್ ಬುದ್ಧಿವಾದ ಹೇಳಿಸಿದ್ದಾರೆ. ನಿನ್ನೆ ರಾತ್ರಿ ಡಿಕೆಶಿ, ಚೆಲುವರಾಯಸ್ವಾಮಿ ಕರೆದು ಮಾತನಾಡಿದ್ದು, ಜಮೀರ್ ಲೂಸ್ ಟಾಕ್ ಬಗ್ಗೆ ಚಲುವರಾಯಸ್ವಾಮಿ ಬಳಿ ಡಿಕೆ ಬೇಸರ ಹೊರಹಾಕಿದ್ದಾರೆ. ಅಲ್ಲದೇ ಈ ರೀತಿ ಹೇಳಿಕೆ ಕೊಟ್ಟು ಪಕ್ಷಕ್ಕೆ ಡ್ಯಾಮೇಜ್ ಮಾಡದಂತೆ ಡಿಕೆ, ಜಮೀರ್‌ಗೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಡಿಕೆಶಿ ಮತ್ತು ಜಮೀರ್ ನಡುವೆ ಚೆಲುವರಾಯಸ್ವಾಮಿ ಸಂಧಾನಕ್ಕೆ ಯತ್ನ ನಡೆಸಿದ್ದಾರೆ.
ಒಕ್ಕಲಿಗರಿಗೆ ಮುಜುಗರ ಆಗೋ ರೀತಿ ಹೇಳಿಕೆ ಕೊಡೋದು ಸರಿಯಲ್ಲಎಂದ ಚೆಲುವರಾಯಸ್ವಾಮಿ ಜಮೀರ್‌ಗೆ ಹೇಳಿದ್ದಾರೆ. ಅದಕ್ಕೆ ಉದ್ದೇಶಪೂರ್ವಕವಾಗಿ ನೋಯಿಸಬೇಕು ಅಂತ ಹೇಳಿಲ್ಲ ಎಂದು ಜಮೀರ್ ಉತ್ತರಿಸಿದ್ದಾರೆ.
ನಮ್ಮ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ ಅನ್ನೋದನ್ನ ಜಮೀರ್ ಪುನರುಚ್ಛಾರ ಮಾಡಿದ್ದಾರೆ. ಒಕ್ಕಲಿಗರ ಜೊತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದಕ್ಕೆ ಮುಸ್ಲಿಂ ಮತಗಳು ಬೇಕು ಎಂಬ ಸಂದೇಶವನ್ನು ಚೆಲುವರಾಯಸ್ವಾಮಿ ಮೂಲಕ ಜಮೀರ್ ರವಾನಿಸಿದ್ದಾರೆ. ಆದ್ರೆ, ಡಿಕೆ ಮಾತ್ರ, ಈ ವಿಚಾರದ ಬಗ್ಗೆ ಮಾತನಾಡದೇ ನಾನು ಕೇವಲ ಭಾರತ್ ಜೋಡೋ ವಿಚಾರ ಬಗ್ಗೆ ಚಲುವರಾಯಸ್ವಾಮಿ ಜೊತೆ ಮಾತಾಡಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಜಮೀರ್‌ಗೆ ಅವರ ಆಪ್ತನ ಮೂಲಕವೇ ವಾರ್ನಿಂಗ್ ಕೊಡಿಸಿದ್ದಾರೆ. ಆದ್ರೆ, ಒಕ್ಕಲಿಗರಷ್ಟೇ ಮುಸ್ಲಿಮರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೇಕು ಎಂಬ ಮೆಸೇಜ್ ಜಮೀರ್ ನೀಡಿದ್ದಾರೆ. ಈ ಜಟಾಪಟಿ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದುನೋಡಬೇಕಿದೆ.
ರೂಪೇಶ್ ಬೈಂದೂರು ಪವರ್ ಟಿವಿ