Monday, December 23, 2024

ಸಾವಿಗೂ ಮುನ್ನ ಸಮಾಧಿ ನಿರ್ಮಿಸಿಕೊಂಡ ವ್ಯಕ್ತಿ

ಚಾಮರಾಜನಗರ : ಯಾರೇ ಆಗಲಿ ಮೃತಪಟ್ಟ ಬಳಿಕ ಸಮಾಧಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾನು ಯಾರಿಗೂ ತೊಂದರೆ ಕೊಡಬಾರದು, ತನ್ನ ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ-ವಿಧಾನ ನೆರವೇರಬೇಕೆಂದ ಬಯಸಿ 20ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು, ಅಲ್ಲೇ ಇಂದು ಅಂತಿಮ ವಿಧಿ ವಿಧಾನ ನೆರವೇರಿದೆ.

ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟಮಲ್ಲಪ್ಪ(85) ದೈವಾಧೀನರಾಗಿದ್ದು 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ರೂ. ನಗದನ್ನೂ ಮೊದಲೇ ಎತ್ತಿಟ್ಟಿದ್ದು ಅದೇ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು, ಮೂವರು ಪುತ್ರರಿದ್ದಾರೆ‌‌. ತನ್ನ ತಿಥಿಯನ್ನು ತನ್ನದೇ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಮಾಡಿ ಹಣ ಎತ್ತಿಟ್ಟಿದ್ದರು‌ ಎಂದು ಕುಟುಂಬಸ್ಥರು ತಿಳಿಸಿದರು.

ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೋನಾದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು‌. ಅಂತ್ಯಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು.ಕಳೆದ 12ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ಭಾನುವಾರ ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ.

ಒಟ್ಟಿನಲ್ಲಿ ಪುಟ್ಟಮಲ್ಲಪ್ಪ ಬದುಕಿನುದ್ದಕ್ಕೂ ಸ್ವಾಭಿಮಾನದಿಂದ ಬದುಕಿ ಈಗ ಸಾವಿನಲ್ಲೂ ಸ್ವಾಭಿಮಾನ ಮೆರೆದಿರುವುದು ಅಪರೂಪದಲ್ಲೇ ಅಪರೂಪ.

ಶ್ರೀನಿವಾಸ್ ನಾಯಕ , ಪವರ್ ಟಿವಿ ಚಾಮರಾಜನಗರ

RELATED ARTICLES

Related Articles

TRENDING ARTICLES