ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದೂ ಜಾತಿಯ ಹಂಗಿನಲ್ಲಿ ಕೆಲಸ ಮಾಡಲಿಲ್ಲ ಎಂದು ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.
ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಆಡಳಿತ ನೀತಿ- ನಿರ್ಧಾರ” ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಎಲ್ಲರೂ ಮುಂಗೋಪಿ ಎನ್ನುತ್ತಾರೆ. ಕಾರಣ ಜನವಿರೋಧಿಗಳ ಧ್ವನಿ ಅಡಗಿಸಲು ಅವರು ಮುಂದಾಗುವುದರಿಂದ ಮುಂಗೋಪಿ ಎನಿಸಿಕೊಂಡಿದ್ದಾರೆ ಎಂದರು.
ಅಲ್ಲದೇ ಅವರು ಎಂದೂ ಜಾತಿಯ ಹೆಸರಲ್ಲಿ ಕೆಲಸ ಮಾಡಲಿಲ್ಲ. ಅವರನ್ನು ಕೆಲವರಷ್ಟೇ ವಿರೋಧಿಸುತ್ತಾರೆ. ಆದರೆ, ಕೋಟ್ಯಾಂತರ ಜನ ಪ್ರೀತಿಸುತ್ತಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಸ್ಥಾನಗಳು ಸಂವಿಧಾನಿಕ ಹುದ್ದೆಗಳೇ ಹೊರತು, ಜಾತಿ ಆಧಾರಿತ ಹುದ್ದೆಗಳಲ್ಲ. ಈ ಎಲ್ಲಾ ವಿಚಾರಗಳು ಗ್ರಂಥದಲ್ಲಿ ಉಲ್ಲೇಖವಾಗಿವೆ. ನಾಡಿನ ಜನತೆಗೆ ಈ ಗ್ರಂಥ ಅಮೂಲ್ಯವಾದ ಕೊಡುಗೆ.
ಗ್ರಂಥಕ್ಕೆ 27 ಮಹನೀಯರು ಅವರ ರಚನೆಯನ್ನು ಕೊಟ್ಟಿದ್ದಾರೆ. ಇದರ ಒಟ್ಟಾರೆ ತಾತ್ಪರ್ಯ ಪ್ರಜಾಪ್ರಭುತ್ವ, ಸಂವಿಧಾನ ಜಾರಿಯಾಗಲು ಬೇಕಾದ ಅಂಶಗಳನ್ನು ಒಳಗೊಂಡಂತೆ ಹಲವು ಮಹತ್ವದ ವಿಚಾರಗಳನ್ನು ಒಳಗೊಂಡಿದೆ. ಗ್ರಂಥದಲ್ಲಿ ಸಿದ್ದರಾಮಯ್ಯನವರ ಅವಧಿಯ ಆಡಳಿತ ನಿರ್ವಹಣೆಯನ್ನು ವಿಶ್ಲೇಷಣೆ ಮಾಡಲಾಗಿದೆ ಎಂದು ತಿಳಿಸಿದರು.