ಚಿಕ್ಕಬಳ್ಳಾಪುರ: ನಕಾಶೆ ರಸ್ತೆ ಒತ್ತುವರಿ ಮಾಡಿಕೊಂಡು ರಾಜಾರೋಷವಾಗಿ ಬೆಳೆಗಳನ್ನಿಟ್ಟುಕೊಂಡಿದ್ದ ರೈತರ ಜಮೀನುಗಳಿಗೆ ಲಗ್ಗೆ ಇಟ್ಟ ಜೆಸಿಬಿ, ಮುಲಾಜಿಲ್ಲದೇ ಬೆಳೆಗಳನ್ನು ನಾಶ ಮಾಡಿ ರಸ್ತೆ ಕೆಲಸ ಮಾಡಿದೆ. ರೈತರ ಗೋಳಿನ ನಡುವೆಯೂ ತಾಲ್ಲೂಕು ಆಡಳಿತ, ರೈತರ ತೋಟಗಳಲ್ಲಿ ಬೆಳೆಗಳನ್ನು ನಾಶ ಮಾಡಿ ರಸ್ತೆ ಕೆಲಸ ಮಾಡಿದ್ದರಿಂದ ಬಂಡವಾಳ ಹಾಕಿ ಕೈಗೆ ಬಂದಿದ್ದ ಬೆಳೆಗಳು ಮಣ್ಣು ಪಾಲಾದವು.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಯರ್ರಬಾಪನಹಳ್ಳಿ ಗ್ರಾಮ ಭಾರಿ ಹೈಡ್ರಾಮಾಗೆ ಸಾಕ್ಷಿಯಾಯಿತು. ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯಲಾಗಿತ್ತು. ಈ ಬಗ್ಗೆ ತಾಲೂಕು ಆಡಳಿತ ಹಲವು ಬಾರಿ ವಾರ್ನ್ ಮಾಡಿದ್ದರೂ ಕೇಳಿರಲಿಲ್ಲ. ಸಮೀಪ ಕೆಲ ರೈತರು ನಕಾಶೆ ರಸ್ತೆ ಒತ್ತುವರಿ ಮಾಡಿಕೊಂಡು ಬೆಳೆಗಳನ್ನಿಟ್ಟುಕೊಂಡಿದ್ದರಿಂದ ಜನ-ಜಾನುವಾರುಗಳ ಸಂಚಾರಕ್ಕೆ ತೊಂದರೆಯಾಗ್ತಿತ್ತು. ರೈತರು ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಆದೇಶದಂತೆ ಮಂಡಿಕಲ್ ಪಿಡಿಒ ಸಮ್ಮುಖದಲ್ಲಿ ಜೆಸಿಬಿಯಿಂದ ಬೆಳೆ ಸಮೇತ ರಸ್ತೆ ಒತ್ತುವರಿ ತೆರವು ಮಾಡಲಾಯಿತು.
ರೈತರು ರಸ್ತೆ ಒತ್ತುವರಿ ಮಾಡಿಕೊಂಡಿರೋದು ನಿಜ. ಆದರೆ, ಬೆಳೆದ ಬೆಳೆಗಳ ಫಸಲು ಪಡೆಯಲು ಕಾಲಾವಕಾಶ ನೀಡಿದ್ದರೆ ಭೂಮಿಗೆ ಹಾಕಿದ ಬಂಡವಾಳವಾದರೂ ವಾಪಸ್ ಬರ್ತಿತ್ತು.ಆದರೆ, ತಾಲೂಕು ಆಡಳಿತ ಸಮಯಾವಕಾಶ ನೀಡದೇ ಗುಲಾಬಿ, ಚೆಂಡು ಹೂ, ಮೆಣಸು ಸೇರಿ ಇನ್ನಿತರೆ ಬೆಳೆಗಳನ್ನು ಡ್ರಿಪ್ ಸಿಸ್ಟಂ ಸಮೇತ ಕಿತ್ತು ಹಾಕಿದ್ದು ಅನ್ನದಾತರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇನ್ನೂ ರೈತರಿಗೆ ಒತ್ತುವರಿ ರಸ್ತೆ ತೆರವುಗೊಳಿಸುವಂತೆ ಸಾಕಷ್ಟು ಬಾರಿ ತಿಳಿ ಹೇಳಿದರೂ, ಕೇಳದೇ ಪದೇ ಪದೇ ಬೆಳೆಗಳನ್ನು ಬೆಳೆಯುತ್ತಿದ್ದರು ಎನ್ನಲಾಗಿದೆ. ಒಟ್ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡ್ರೆ ಪ್ರತಿಯೊಬ್ಬರೂ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇದು ಸೂಕ್ತ ನಿದರ್ಶನವಾಗಿದೆ.
ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ