ಬಳ್ಳಾರಿ : ತಾಲ್ಲೂಕಿನ ಹಳೆ ಯರ್ರಗುಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸೂರ್ಯಕಾಂತಿ ಬೆಳೆದಿರುವ ನೂರಾರು ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬಳ್ಳಾರಿ ತಾಲೂಕಿನ ನೂರಾರು ರೈತರು ಈ ವರ್ಷ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಸೂರ್ಯಕಾಂತಿ ಬೀಜ ತಂದು ಬಿತ್ತಿದ್ದರು.ಆದರೆ, ಕಟಾವು ಆಗುವ ಮೊದಲೇ ಇಳುವರಿ ಇಳಿಮುಖ ಆಗುವ ದಟ್ಟ ಲಕ್ಷಣಗಳು ಕಂಡು ಬಂದಿವೆ.ಒಂದೇ ಗಿಡದಲ್ಲಿ ಹಲವು ಹೂವುಗಳು ಬೆಳೆದು, ಅವು ತೆನೆಗಳಾಗುತ್ತಿವೆ. ಹೀಗೆ ಬೆಳೆ ಬಂದರೆ ಗಿಡದ ಶಕ್ತಿ ಹಲವು ಕಡೆಗಳಲ್ಲಿ ಹಂಚಿ ಹೋಗಿ ಉತ್ತಮವಾದ ರೀತಿಯಲ್ಲಿ ಬೆಳೆ ಬರುವುದಿಲ್ಲ ಎಂಬುದು ರೈತರ ಆತಂಕ.
ಪ್ರತಿ ವರ್ಷ ಈ ಭಾಗದ ರೈತರು ಬಳ್ಳಾರಿಯಲ್ಲೇ ದೊರೆಯುವ ವಿವಿಧ ಬ್ರಾಂಡೆಡ್ ಕಂಪನಿಗಳ ಸೂರ್ಯಕಾಂತಿ ಬೀಜಗಳನ್ನು ಬಿತ್ತುತ್ತಿದ್ದರು. ಈ ಭಾಗದಲ್ಲಿ ಸೂರ್ಯಕಾಂತಿ ಬೆಳೆಯುವವರ ಸಂಖ್ಯೆಯನ್ನು ಗಮನಿಸಿದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೆಲ ಬೀಜ ವಿತರಕರು ಉತ್ತಮ ಇಳುವರಿಯ ಬೀಜಗಳೆಂದು ನಂಬಿಸಿ ಸಾವಿರಾರು ರೂ.ಗಳನ್ನು ಪಡೆದು ಬೀಜ ನೀಡಿದ್ದಾರೆ. ಆದರೆ ಬಿತ್ತಿದ ಬೀಜಗಳೀಗ ವಿಲಕ್ಷಣ ತೆನೆಗಳ ರೂಪದಲ್ಲಿ ರೈತರ ಬದುಕನ್ನೇ ಕಿತ್ತುಕೊಳ್ಳಲು ಕಾದು ನಿಂತಿವೆ.
ನೊಂದ ರೈತರು ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಹೀಗಾಗಿ ರೈತರ ನೆರವಿಗೆ ಕೃಷಿ ಇಲಾಖೆ ಮುಂದಾಗಬೇಕಿದೆ.
ಶಿವು ಜೊತೆ ಬಸವರಾಜ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ