ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ AICC ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ED ತನಿಖೆ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಿಳಿದಿದ್ದಾರೆ. BJP ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಎಲ್ಲೆಲ್ಲಿ ಏನೇನಾಯ್ತು..?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದಾರೆ.ರಾಜ್ಯದ ವಿವಿಧೆಡೆ ಬೀದಿಗಿಳಿದು ಹೋರಾಟ ಮಾಡಿದ್ರು.
ಡಿಸಿ ಕಚೇರಿಗೆ ತೆರಳಲು ಪೊಲೀಸರು ಅನುಮತಿ ನಿರಾಕರಿಸಿದ್ದಕ್ಕೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ರೋಷಾವೇಶ ಪ್ರದರ್ಶಿಸಿದರು. ಮಾಜಿ ಸಚಿವ ರಮಾನಾಥ್ ರೈ, ಮಾಜಿ ಶಾಸಕ ಮೊಯ್ದೀನ್ ಭಾವ, ಮಧು ಬಂಗಾರಪ್ಪ ಸೇರಿ ರೊಚ್ಚಿಗೆದ್ದ ‘ಕೈ’ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಹುಬ್ಬಳ್ಳಿಯಲ್ಲಿ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆರಂಭಗೊಂಡ ರೋಡ್ ಶೋ ನಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ ಸೇರಿ ಪ್ರಮುಖರು ಭಾಗಿಯಾಗಿದ್ರು.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಜಿ ಸಚಿವ ಪರಮೇಶ್ವರ್ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಮಾಜಿ ಸಚಿವ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಕೋಲಾರದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಹಾಗೂ ಕೇಂದ್ರದ ಮಾಜಿ ಸಚಿವಕೆ.ಹೆಚ್.ಮುನಿಯಪ್ಪ ಬಣದ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.ಒಂದೇ ಸ್ಥಳದಲ್ಲಿ ಎರಡೂ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ ನಡೆಸಲಾಯಿತು.ಈ ಮೂಲಕ ಮುನಿಯಪ್ಪ, ರಮೇಶ್ ಬಣಗಳ ಮಧ್ಯೆ ಭಿನ್ನಮತ ಮತ್ತೊಮ್ಮೆ ಬಯಲಾಯಿತು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ತೆರಿಗೆ ಕಚೇರಿವರೆಗೆ ಯೂತ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಭಾಗಿಯಾಗಿದ್ರು.
ಬಳ್ಳಾರಿ ನಗರ, ಹೊಸಪೇಟೆ ಪಟ್ಟಣ ಕಾಂಗ್ರೆಸ್ ವತಿಯಿಂದ ಕಂಪ್ಲಿ ಶಾಸಕ ಗಣೇಶ್, ಕೈ ಮುಖಂಡ ರಾಜಶೇಖರ್ ಹಿಟ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರೊಟೆಸ್ಟ್ ನಡೆಯಿತು.ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್, ಶಾಸಕರಾದ ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್ ಸೇರಿ ಹಲವರು ಭಾಗಿಯಾಗಿದ್ರು.ಪ್ರತಿಭಟನೆ ವೇಳೆ ಅಂಬೇಡ್ಕರ್ ಸರ್ಕಲ್ ಬಳಿ ಹೈಡ್ರಾಮಾ ನಡೆಯಿತು.ರಸ್ತೆ ದಾಟುತ್ತಿದ್ದ ಕುಟುಂಬ ಹಾಗೂ ಪೊಲೀಸರ ನಡುವೆ ವಾಗ್ವಾದವಾಯಿತು. ಈ ವೇಳೆ ಗರ್ಭಿಣಿಯನ್ನು ತಳ್ಳಾಡಬೇಡಿ ಅಂತ ಪತಿ ಮನವಿ ಮಾಡಿದ್ರು.
ಶಿವಮೊಗ್ಗದ ಶಿವಪ್ಪನಾಯಕ ವೃತ್ತದಿಂದ ಡಿಸಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಡಿಸಿ ಕಚೇರಿಗೆ ಮತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಗೇಟ್ ಮುಂಭಾಗದಲ್ಲೇ ಪೊಲೀಸರು ಬಂಧಿಸಿದರು. ಇದರಿಂದ ಕೆರಳಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧದ ED ತನಿಖೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.ಇದು ಸರ್ಕಾರಕ್ಕೆ ಹೊಸ ತಲೆನೋವು ತರಿಸಿದೆ.
ಬ್ಯೂರೋ ರಿಪೋರ್ಟ್ ಪವರ್ ಟಿವಿ