Monday, December 23, 2024

ಪ್ರೇಯಸಿ ಕತ್ತು ಹಿಸುಕಿ ಕೊಂದು; ಪ್ರಿಯಕರ ಆತ್ಮಹತ್ಯೆ

ಬೆಳಗಾವಿ : ಪ್ರಸಿದ್ಧ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್‌ನರ್ಸ್‌ ಆಗಿ, ಬದುಕು ಕಟ್ಟಿಕೊಳ್ಳಲು ಬಂದಿದ್ದಳು ಆ ಚೆಲುವೆ. ಪೊಲೀಸ್‌ ಆಫೀಸರ್ ಆಗುವ ಕನಸು ಹೊತ್ತಿ ಎಂಎ ವ್ಯಾಸಂಗದ ಜೊತೆಜೊತೆಗೆ ಸಿಇಟಿ ಪರೀಕ್ಷೆಗೆ ಸಿದ್ಧನಾಗುತ್ತಿದ್ದ ಆ ಯುವಕ. ಕನಸಿನ ಮೂಟೆ ಹೊತ್ತು ಹಳ್ಳಿಯಿಂದ ಬಂದಿದ್ದ ಇಬ್ಬರೂ ‘ಪ್ರೀತಿ’ಯ ಪಾಶಕ್ಕೆ ಸಿಲುಕಿದ್ದರು. ತಡರಾತ್ರಿ ಇಬ್ಬರ ಮಧ್ಯೆ ಉಂಟಾದ ಸಣ್ಣ ವಿರಸ ಅವರಿಬ್ಬರ ಜೀವವನ್ನೇ ಕಿತ್ತುಕೊಂಡಿತು. ಅಷ್ಟಕ್ಕೂ ಆ ಚೆಂದುಳ್ಳಿ ಚೆಲುವೆ ಬದುಕಲ್ಲಿ ನಡೆದಿದ್ದೇನು?

ಪ್ರೇಯಸಿಯನ್ನೇ ಕತ್ತು ಹಿಸುಕಿ ಕೊಲೆಗೈದ ಪ್ರಿಯಕರ ತಾನೂ ಆತ್ಮಹತ್ಯೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ ಹಾಗೂ ಮದ್ಲೂರು ಗ್ರಾಮದ ರೇಣುಕಾ ಮೃತ ಪ್ರೇಮಿಗಳಾಗಿದ್ದಾರೆ. ಯುವತಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್ ಆಗಿದ್ದಳು. ಇನ್ನು ಯುವಕ ರಾಮಚಂದ್ರ ತೆಣಗಿ ರಾಣಿ ಚನ್ನಮ್ಮ ವಿವಿಯಲ್ಲಿ ಎಂಎ ವ್ಯಾಸಂಗ ಮಾಡ್ತಿದ್ದ.ಗುರುವಾರ ರಾತ್ರಿ ರಾಮಚಂದ್ರ ರೇಣುಕಾ ವಾಸವಿದ್ದ ಬಾಡಿಗೆ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಮಧ್ಯೆ ಅದೇನಾಗಿದೆಯೋ ಗೊತ್ತಿಲ್ಲ. ರಾಮಚಂದ್ರ ಕತ್ತು ಹಿಸುಕಿ ರೇಣುಕಾಳನ್ನು ಹತ್ಯೆ ಮಾಡಿದ್ದಾನೆ. ನಂತರ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತಾ ತನ್ನ ಸಂಬಂಧಿಗೆ ವಾಟ್ಸಪ್ ಮಾಡಿದ್ದಾನೆ. ಬಳಿಕ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಇನ್ನು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಬ್ಬರ ನಡುವಿನ ವಿರಸವೇ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಾನು ಅವಳನ್ನು ಲವ್ ಮಾಡಿ ಹುಚ್ಚ ಆಗಿದ್ದೆ. ನನ್ನ ಟೈಂ, ಜೀವನ ಎರಡು ಹಾಳಾಗಲು ಯುವತಿ ಕಾರಣ. ಅದಕ್ಕೆ ಆಕೆಯನ್ನು ‌ಕೊಂದು ತಾನೂ ಸೂಸೈಡ್ ಮಾಡಿಕೊಂಡಿರುವುದಾಗಿ ರಾಮಚಂದ್ರ ಉಲ್ಲೇಖಿಸಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಯುವಕ-ಯುವತಿ ಇಬ್ಬರೂ ಪ್ರತಿಭಾವಂತರು. ಕನಸಿನ ಮೂಟೆ ಹೊತ್ತು ಹಳ್ಳಿಯಿಂದ ಬೆಳಗಾವಿ ಮಹಾನಗರಕ್ಕೆ ಬಂದಿದ್ದರು. ಆದರೆ, ಆತುರದಲ್ಲಿ ರಾಮಚಂದ್ರ ತೆಗೆದುಕೊಂಡ ನಿರ್ಧಾರದಿಂದ ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಕ್ಯಾಮರಾಮೆನ್ ರಾಹುಲ್‌ ಜೊತೆ ಅಣ್ಣಪ್ಪ ಬಾರ್ಕಿ, ಪವರ್ ಟಿವಿ, ಬೆಳಗಾವಿ

RELATED ARTICLES

Related Articles

TRENDING ARTICLES