Friday, November 8, 2024

ಚುನಾವಣಾ ರಾಜಕೀಯಕ್ಕೆ ಬಿಎಸ್​ವೈ ಗುಡ್ ಬೈ

ಶಿವಮೊಗ್ಗ: ಮಾಜಿ ಸಿಎಂ ಬಿಎಸ್​ವೈ ಚುನಾವಣಾ ರಾಜಕೀಯಕ್ಕೆ‌ಗುಡ್ ಬೈ ಹೇಳಿದ್ದಾರೆ. ಶಿಕಾರಿಪುರ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡುವ ಮೂಲಕ ಸಕ್ರಿಯ ರಾಜಕಾರಣದಿಂದ್ಲೇ ದೂರ ಸರಿಯುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಐದು ದಶಕಗಳ ಕಾಲ ಸೈಕಲ್ ತುಳಿದು ಪಕ್ಷ ಕಟ್ಟಿದ ನೇತಾರ, ರಾಜಕೀಯ ಯುಗಾಂತ್ಯಕ್ಕೆ ಮುನ್ನುಡಿ ಬರೆದಿದ್ದಾರೆ.B. S. Yediyurappa

ಬಿ.ಎಸ್.ಯಡಿಯೂರಪ್ಪ.. ಕರುನಾಡಲ್ಲಿ ಕಮಲ ಅರಳಿಸಿದ ನೇತಾರ.. ಐದು ದಶಕಗಳ ಕಾಲ ರಾಜ್ಯ ಬಿಜೆಪಿಯನ್ನ ಕಟ್ಟಿದ ಧೀಮಂತ ನಾಯಕ.. ಆದ್ರೆ, ಏಕಾಏಕಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.. ಪುತ್ರ ವಿಜಯೇಂದ್ರನಿಗಾಗಿ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನೇ ತ್ಯಾಗ ಮಾಡಿದ್ದಾರೆ.. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಪುತ್ರನನ್ನ ಕೈಹಿಡಿಯುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ.. ಆದ್ರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಆಸೆಯನ್ನ ತೋರಿಸಿದ್ರೂ‌, ಶೀಘ್ರದಲ್ಲೇ ಸಕ್ರಿಯ ರಾಜಕಾರಣದಿಂದಲೂ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಪಕ್ಷದೊಳಗಿನ ಬೆಳವಣಿಗೆಗಳು, ಹೈಕಮಾಂಡ್ ನಡೆ.. ಪಕ್ಷ ಕಟ್ಟಿದವರನ್ನ ನಡೆಸಿಕೊಳ್ಳುವ ರೀತಿ ಎಲ್ಲವೂ ಯಡಿಯೂರಪ್ಪನವರ ನಿರ್ಧಾರಕ್ಕೆ ಕಾರಣಗಳಾಗಿವೆ.. ಕಳೆದೊಂದು ವರ್ಷದಿಂದಲೂ ಪಕ್ಷದೊಳಗೆ ಹೇಳಿಕೊಳ್ಳಲಾಗದಂತ ಯಾತನೆಯನ್ನ ಮಾಜಿ ಸಿಎಂ ಅನುಭವಿಸಿದ್ದಾರಂತೆ.. ವರಿಷ್ಠರು ತಮ್ಮನ್ನ ಮೂಲೆಗುಂಪು ಮಾಡುವ ಪ್ರಯತ್ನವೂ ಕಾರಣವಾಗಿದೆ.. ಆದ್ರೂ‌, ಎಲ್ಲೂ ತಮ್ಮ ಒಳಗಿನ ನೋವನ್ನ ಬಹಿರಂಗವಾಗಿ ವ್ಯಕ್ತಪಡಿಸದೇ ತೋಳಲಾಡುತ್ತಿದ್ರು.. ಲಂಡನ್ ಪ್ರವಾಸ ಮಾಡಿ ಅದನ್ನ ಮರೆಮಾಚುವ ಪ್ರಯತ್ನ ನಡೆಸಿದ್ರು.. ಆದ್ರೂ ಅವರ ನೋವು ಕಡಿಮೆಯಾಗಲಿಲ್ಲ.. ಹೀಗಾಗಿ ಅನಿವಾರ್ಯವಾಗಿ ಚುನಾವಣಾ ರಾಜಕೀಯದಿಂದ ಹೊರಗುಳಿಯಲು ಪ್ರಯತ್ನಿಸಿ ಅದನ್ನ ಹೊರಹಾಕಿದ್ದಾರೆ.. ಹೀಗಾಗಿ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನ ಪುತ್ರನಿಗೆ ತ್ಯಾಗ ಮಾಡಿದ್ದಾರೆ.. ಶೀಘ್ರದಲ್ಲೇ ರಾಜಕೀಯ ನಿವೃತ್ತಿಯನ್ನೂ‌ಘೋಷಿಸುವ ಸಾಧ್ಯತೆಯಿದೆ..

ಪುತ್ರ ವಿಜಯೇಂದ್ರನ ಭವಿಷ್ಯಕ್ಕೆ ಈ ನಿರ್ಧಾರವೇ..? :

ಇನ್ನು, ವಯೋಸಹಜ ಕಾರಣ ಕೊಟ್ಟು ಸಿಎಂ ಸ್ಥಾನದಿಂದ ಅರ್ಧದಲ್ಲಿ ಇಳಿಸಿದಾಗಲೇ ಬಿಎಸ್​ವೈ ಗೆ ಪಕ್ಷದಲ್ಲಿ ಮಾತಿಗೆ ಬೆಲೆ ಇಲ್ಲ ಎಂಬುದು ಮನದಟ್ಟಾಗಿತ್ತು.. ತನ್ನದು ಹೋಗ್ಲಿ.. ಆದ್ರೆ, ಮಕ್ಕಳನ್ನ ಸಕ್ರಿಯ ರಾಜಕಾರಣದಲ್ಲಿ ಉಳಿಸಿ ಬೆಳೆಸಬೇಕೆಂದು ಪಣತೊಟ್ಟಿದ್ರು.. ಹಾಗಾಗಿಯೇ, ಮರ್ಯಾದೆಗೆ ಧಕ್ಕೆ ಬಂದ್ರೂ ತೋರಿಸಿಕೊಳ್ಳದೆ ಪಕ್ಷದಲ್ಲಿ ಮುನ್ನಡೆದಿದ್ರು.. ಪುತ್ರ ವಿಜಯೇಂದ್ರನನ್ನ ಎಂಎಲ್ಸಿ ಮಾಡಿ‌ ಸಚಿವ ಸ್ಥಾನ ನೀಡಿ ಎಂಬ ಬೇಡಿಕೆ ಇಟ್ಟಿದ್ರು.. ಆದ್ರೆ ಅದಕ್ಕೂ ಹೈಕಮಾಂಡ್ ಬೆಲೆ ನೀಡಲಿಲ್ಲ.. ಕೊನೆಗೆ ನಿಮ್ಮ ಕ್ಷೇತ್ರವನ್ನ ಬೇಕಾದ್ರೆ ಪುತ್ರನಿಗೆ ಬಿಟ್ಟು ಕೊಡಿ ಎಂಬ ಸಂದೇಶ ವರಿಷ್ಠರಿಂದ ರವಾನೆಯಾಗಿತ್ತು ಎನ್ನಲಾಗ್ತಿದೆ.. ಹೀಗಾಗಿಯೇ ಕ್ಷೇತ್ರ ಬಿಟ್ಟುಕೊಡದೇ ಇದ್ರೆ ಪುತ್ರನಿಗೆ ಇವರು ಟಿಕೆಟ್ ಕೂಡ ಕೊಡುವುದಿಲ್ಲ ಎಂಬುದು ಮನದಟ್ಟಾಯ್ತು.. ಆ ಕಾರಣಕ್ಕಾಗಿಯೇ ತಾನು ಬಿದ್ದು ಹೋಗುವ ಮತ ಇವರಾದ್ರು ಅಧಿಕಾರಕ್ಕೆ ಬರಲಿ ಎಂದು ಕ್ಷೇತ್ರವನ್ನೇ ತ್ಯಾಗ ಮಾಡಿದ್ದಾರೆಂಬುದು ಅವರ ಆಪ್ತ ವಲಯದಿಂದ ಹರಿದಾಡ್ತಿರುವ ಮಾಹಿತಿ.

ಇನ್ನು, ಈ ಬಗ್ಗೆ ಮಾತ್ನಾಡಿದ ವಿಜಯೇಂದ್ರ, ತಂದೆಯವರ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ನಡೆದುಕೊಳ್ತೇನೆ.. ರಾಜ್ಯ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡೋದು ನನ್ನ ಕರ್ತವ್ಯ..ಹಿಂದಿನಿಂದಲೂ ಅದನ್ನೇ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ.. ಯಡಿಯೂರಪ್ಪನವರ ಡಿಕ್ಷನರಿಯಲ್ಲಿ ನಿವೃತ್ತಿ ಅನ್ನೋ ಪದವೇ ಇಲ್ಲ.. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ರು, ಮುಂದೇನೂ ಮಾಡ್ತಾರೆ ಅಂದ್ರು..

ಇನ್ನು, ಯಡಿಯೂರಪ್ಪನವರ ಕ್ಷೇತ್ರ ತ್ಯಾಗವನ್ನ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.. ಅವರಿಗೆ ವಯಸ್ಸಾಗಿರೋದ್ರಿಂದ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.. ಆದ್ರೆ ಅವರ ಮಾರ್ಗದರ್ಶನದಲ್ಲೇ ಪಕ್ಷ ಮುಂದುವರಿಯಲಿದೆ ಎಂದು ಹೇಳ್ತಿದ್ದಾರೆ.

ಒಟ್ನಲ್ಲಿ ಯಡಿಯೂರಪ್ಪನವರ ಸಕ್ರಿಯ ರಾಜಕಾರಣದ ದಿನಗಳು ಕೊನೆಯಾಗುವ ಕಾಲ‌ ಹತ್ತಿರ ಬರ್ತಿದೆ.. ಪ್ರಸ್ತುತ ಕ್ಷೇತ್ರ ತ್ಯಾಗವನ್ನ ಮಾಡಿದ್ದಾರೆ.. ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದಾರೆ.. ಶೀಘ್ರದಲ್ಲೇ ಸಕ್ರಿಯ ರಾಜಕಾರಣದಿಂದಲೂ ದೂರಾಗುವ ಸಾಧ್ಯತೆಗಳಿವೆ..

ಶಿವಮೊಗ್ಗದಿಂದ ಮೋಹನ್​ ಕೃಷ್ಣ ಜೊತೆ ರಾಘವೇಂದ್ರ.ವಿ.ಎನ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES