Wednesday, January 22, 2025

2020ನೇ ಸಾಲಿನ 68ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್

ಕೇಂದ್ರ ಸರ್ಕಾರ 2020ನೇ ಸಾಲಿನ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತುಳು ಸೇರಿ ಕನ್ನಡಕ್ಕೆ ಈ ಬಾರಿ ಒಟ್ಟು ಐದು ಪ್ರಶಸ್ತಿಗಳು ಲಭಿಸಿವೆ. ಹಾಗಾದ್ರೆ ಯಾರೆಲ್ಲಾ ಯಾವ್ಯಾವ ಪ್ರಶಸ್ತಿಗೆ ಭಾಜನರಾದ್ರು ಅನ್ನೋ ಡಿಟೈಲ್ಡ್ ರಿಪೋರ್ಟ್​ ಇಲ್ಲಿದೆ ಜಸ್ಟ್ ರೀಡ್​​.

2020ನೇ ಸಾಲಿನ 68ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್

ಕನ್ನಡಕ್ಕೆ ನಾಲ್ಕು ಪ್ರಶಸ್ತಿ.. ತುಳುಗೆ ಒಂದು ಪ್ರಶಸ್ತಿಯ ಗರಿ

ಯೆಸ್.. ಪ್ರತೀ ವರ್ಷದಂತೆ ಕೇಂದ್ರ ಸರ್ಕಾರ ಈ ವರ್ಷವೂ ರಾಷ್ಟ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟ ಮಾಡಿದೆ. ಕನ್ನಡಕ್ಕೆ ಬರೋಬ್ಬರಿ ನಾಲ್ಕು ಪ್ರಶಸ್ತಿಗಳು ಲಭಿಸಿದ್ದು, ಕರಾವಳಿಯ ತುಳು ಸಿನಿಮಾಗೂ ಪ್ರಶಸ್ತಿ ದೊರೆತಿರೋದು ಖುಷಿಯ ವಿಚಾರ. ಪವನ್ ಒಡೆಯರ್ & ಅಪೇಕ್ಷಾ ಪವನ್ ಒಡೆಯರ್ ನಿರ್ಮಾಣದ ಹಾಗೂ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಎರಡೆರಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಅತ್ಯುತ್ತಮ ಆಡಿಯೋಗ್ರಫಿ ಅಂದ್ರೆ ಸಿಂಕ್ ಸೌಂಡ್​ಗಾಗಿ ಪ್ರಶಸ್ತಿ ಪಡೆದಿದೆ. ಈ ಸಿನಿಮಾ ಸದ್ಯದಲ್ಲೇ ಥಿಯೇಟರ್​ಗೆ ಬರಲಿದ್ದು, ಪವರ್ ಟಿವಿ ಜೊತೆ ಖುಷಿ ಹಂಚಿಕೊಂಡಿದ್ದಾರೆ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್.

ಇನ್ನು ದಿವಂಗತ ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆದಿದೆ. ಅತ್ಯತ್ತಮ ಪರಿಸರ ಕಾಳಜಿ ಸಿನಿಮಾ ವಿಭಾಗದಲ್ಲಿ ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡಕ್ಕೆ ಪ್ರಶಸ್ತಿ ಲಭಿಸಿದೆ. ಬಹುಶಃ ಇಂದು ಸಂಚಾರಿ ವಿಜಯ್ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ..? ಆದ್ರೆ ಅಂತಹ ಮನೋಜ್ಞ ಕಲಾವಿದನನ್ನ ಪಡೆದಿದ್ದ ನಮ್ಮ ಕನ್ನಡ ಇಂಡಸ್ಟ್ರಿ ನಿಜಕ್ಕೂ ಧನ್ಯ.

ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ ಡಾ. ಪಿಟಿ ವೆಂಕಟೇಶ್​ ಕುಮಾರ್’ ಅನ್ನೋ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ದೋಚಿದೆ. ಅತ್ಯುತ್ತಮ ಕಲಾ ಹಾಗೂ ಸಂಸ್ಕೃತಿ ವಿಭಾಗದಲ್ಲಿ ಈ ಡಾಕ್ಯುಮೆಂಟರಿಗೆ ಅವಾರ್ಡ್​ ಬಂದಿರೋದು ವಿಶೇಷ. ಇನ್ನು ಇವಲ್ಲದೆ ಕನ್ನಡದ ಉಪಭಾಷೆ ತುಳು ಸಿನಿಮಾಗೂ ಪ್ರಶಸ್ತಿ ಬಂದಿದೆ. ಸಂತೋಷ್ ಮಾದ ಆ್ಯಕ್ಷನ್ ಕಟ್ ಹೇಳಿರೋ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣದ ಜೀಟಿಗೆ ಚಿತ್ರ, ಅತ್ಯುತ್ತಮ ತುಳು ಸಿನಿಮಾ ಆಗಿ ಹೊರಹೊಮ್ಮಿದೆ.

ಬೆಸ್ಟ್ ಸಿನಿಮಾ, ಬೆಸ್ಟ್ ಆ್ಯಕ್ಟರ್, ಬೆಸ್ಟ್ ಆ್ಯಕ್ಟ್ರೆಸ್ ಹೀಗೆ ಮೂರೂ ವಿಭಾಗಗಳಲ್ಲಿ ತಮಿಳಿನ ಸೂರರೈ ಪೋಟ್ರು ಸಿನಿಮಾ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಸುಧಾ ಕೊಂಗಾರ ನಿರ್ದೇಶನದ ಈ ಸಿನಿಮಾದಲ್ಲಿ ನಟ ಸೂರ್ಯ ಹಾಗೂ ನಟಿ ಅಪರ್ಣಾ ಬಾಲಮುರಳಿ ನಟಿಸಿದ್ರು. ವಿಶೇಷ ಅಂದ್ರೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಸೂರ್ಯ ಜೊತೆ ತಾನ್ಹಾಜಿ ಸಿನಿಮಾಗಾಗಿ ಅಜಯ್ ದೇವಗನ್ ಕೂಡ ಪಡೆದಿದ್ದಾರೆ.

ಅಲ್ಲು ಅರ್ಜುನ್​ರ ಅಲಾ ವೈಕುಂಠಪುರಮುಲೋ ಸಿನಿಮಾದ ಸಂಗೀತ ಸಂಯೋಜನೆಗಾಗಿ ಎಸ್ ತಮನ್​ಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಒಟ್ಟಾರೆ ಸೌತ್​ನಿಂದ ಕೂಡ ಸಾಕಷ್ಟು ಚಿತ್ರಗಳು ಅವಾರ್ಡ್​ ರೇಸ್​ನಲ್ಲಿದ್ದವು. ಆದ್ರೆ ಅದೃಷ್ಠವಂತರು ಮಾತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಇದು ಅವ್ರ ಜವಾಬ್ದಾರಿಗಳನ್ನು ಹೆಚ್ಚಿಸಿದೆ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES