Thursday, January 23, 2025

ರಾಷ್ಟ್ರಪತಿ ಚುನಾವಣೆ : ಇಂದು ಮತ ಎಣಿಕೆ

ಬೆಂಗಳೂರು : ಭಾರತದ 15ನೇ ರಾಷ್ಟ್ರಪತಿ ಚುನಾವಣೆ ಭಾಗವಾಗಿ ಸಂಸತ್ ಭವನದಲ್ಲಿ ಇಂದು ಮತ ಎಣಿಕೆ ನಡೆಯಲಿದೆ.

ಬೆಳಿಗ್ಗೆ 11 ಕ್ಕೆ ಸಂಸತ್ ಭವನದ 63ನೇ ಕೊಠಡಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಿ.ಸಿ ಮೋದಿ ಅವರು ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಿದ್ದಾರೆ. ಸಂಜೆ ವೇಳೆಗೆ ಫಲಿತಾಂಶ ತಿಳಿಯಲಿದೆ.

ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು ಕಣದಲ್ಲಿದ್ದಾರೆ.

ಮೊದಲಿಗೆ ಸಂಸದರ ಮತಗಳನ್ನು ಎಣಿಕೆ ಮಾಡಿ ಫಲಿತಾಂಶದ ಟ್ರೆಂಡ್ ಏನಿದೆ ಎಂಬುದನ್ನು ಮುಖ್ಯ ಚುನಾವಣಾ ಅಧಿಕಾರಿ ಹೇಳಲಿದ್ದಾರೆ. ನಂತರ ಇಂಗ್ಲಿಷ್ ವರ್ಣಮಾಲೆಯ ಮೊದಲ ಅಕ್ಷರಗಳ ಆಧಾರದಲ್ಲಿ 10 ರಾಜ್ಯಗಳ ಮತ ಎಣಿಕೆ ಮಾಡಿ ಮುನ್ನಡೆ ಯಾರಿದ್ದಾರೆ? ಎಂದು ಮತ್ತೊಂದು ಸಲ ಘೋಷಣೆ ಮಾಡುತ್ತಾರೆ.

ಎಲ್ಲ ರಾಜ್ಯಗಳ ಮತ ಎಣಿಕೆ ಮುಗಿದ ಮೇಲೆ ಸಂಜೆ ವೇಳೆಗೆ ಯಾರಿಗೆ ಎಷ್ಟು ಮತ ಬಂದಿವೆ ಎಂಬುದನ್ನು ಅಧಿಕೃತವಾಗಿ ಮುಖ್ಯ ಚುನಾವಣಾ ಅಧಿಕಾರಿ ಪಿ.ಸಿ ಮೋದಿ ಅವರು ಪ್ರಕಟ ಮಾಡುವ ಸಾಧ್ಯತೆ ಇದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಶೇ 99 ರಷ್ಟು ಮತದಾನ ನಡೆದಿತ್ತು. ಒಟ್ಟು 4,817 ಲಭ್ಯ ಮತದಾರರಲ್ಲಿ 4,809 ಮತದಾರರು (776 ಸಂಸದರು ಹಾಗೂ 4,033 ವಿಧಾನಸಭೆ ಶಾಸಕರು) ತಮ್ಮ ಮತ ಚಲಾಯಿಸಿದ್ದರು. 8 ಸಂಸದರು ಮತದಾನ ಮಾಡಿರಲಿಲ್ಲ.

ಬಿಜೆಪಿ, ಶಿವಸೇನಾದ ಇಬ್ಬರು, ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ ಹಾಗೂ ಎಐಎಂಐಎಂನ ತಲಾ ಒಬ್ಬ ಸಂಸದರಿಂದ ಆರೋಗ್ಯ ಹಾಗೂ ಇತರ ಕಾರಣಗಳಿಂದ ಮತದಾನ ಮಾಡಲು ಆಗಿರಲಿಲ್ಲ.

ಮತದಾನ ನಡೆದ ದಿನವೇ ಸಂಜೆ ಎಲ್ಲ ರಾಜ್ಯಗಳಿಂದ ಬ್ಯಾಲೆಟ್ ಬಾಕ್ಸ್‌ಗಳು ವಿಮಾನದ ಮೂಲಕ ಸಂಸತ್ ಭವನ ತಲುಪಿದ್ದವು. ವಿಶೇಷವೆಂದರೆ ಬ್ಯಾಲೆಟ್‌ ಬಾಕ್ಸ್‌ಗಳು ‘ಮಿಸ್ಟರ್ ಬ್ಯಾಲೆಟ್‌ ಬಾಕ್ಸ್‌’ ಹೆಸರಿನಲ್ಲಿ ವಿಮಾನ ಟಿಕೆಟ್‌ ಪಡೆದುಕೊಂಡು ಸಹಾಯಕ ಚುನಾವಣಾ ಅಧಿಕಾರಿ ನೇತೃತ್ವದಲ್ಲಿ ವಿಶೇಷ ವಿಮಾನದ ಮೂಲಕ ಸಂಸತ್ ಭವನದ ಸ್ಟ್ರಾಂಗ್ ರೂಮ್ ತಲುಪಿರುತ್ತವೆ.

ದ್ರೌಪದಿ ಮುರ್ಮು ಅವರು ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಬಿಜೆಪಿ ವಿಜಯೋತ್ಸವ ಆಚರಣೆಗೆ ತಯಾರು ಮಾಡಿಕೊಂಡಿದೆ. ಅಲ್ಲದೇ ವಿರೋಧ ಪಕ್ಷಗಳ ಕೆಲ ಶಾಸಕರು ಹಾಗೂ ಸಂಸದರು ಮುರ್ಮು ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ.

RELATED ARTICLES

Related Articles

TRENDING ARTICLES