Wednesday, January 22, 2025

ನಾನು ಕೇಳಿದ್ದನ್ನೆಲ್ಲಾ ಕೊಟ್ಟ ಏಕೈಕ ಮುಖ್ಯಮಂತ್ರಿ ಬೊಮ್ಮಾಯಿ: ಪ್ರತಾಪ ಸಿಂಹ

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಪೆಟ್ಟು ಕೊಟ್ಟರೂ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿಗೆ ಪತ್ರ ಕೊಟ್ಟಿದ್ದೆ. ಅವರು ಸಚಿವ ಸಂಪುಟದ ಮುಂದಿಡಲು ಪತ್ರದ ಮೇಲೆ ನೋಟ್ ಬರೆದರು. ಆ ಫೈಲ್ ಫಾಲೋ ಅಪ್‌ ಮಾಡಲು ಲೇಟರ್‌ನ ಫೋಟೋ ತೆಗೆದುಕೊಳ್ಳಲು ಕೇಳಿದೆ. ಆಗ, ಕಾರ್ಯದ ಒತ್ತಡದಲ್ಲಿದ್ದ ಮುಖ್ಯಮಂತ್ರಿ ಸಣ್ಣದಾಗಿ ಸಿಡುಕಿದರು. ನನ್ನ ಮೇಲೆ ಸಿಡುಕಲು, ಕೋಪಿಸಿಕೊಳ್ಳಲು ಅವರಿಗೆ ಹಕ್ಕಿದೆ ಎಂದು ಸ್ಪಷ್ಟನೆ ನೀಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಯೋಜನೆಯೊಂದಕ್ಕೆ ಸಂಬಂಧಿಸಿ ಮನವಿ ಸಲ್ಲಿಸಿ ಬಳಿಕ ಮೊಬೈಲ್‌ ಫೋನ್‌ನಲ್ಲಿ ಫೋಟೊ ತೆಗೆದುಕೊಳ್ಳಲು ಮುಂದಾದ ಸಂಸದರನ್ನು ಮುಖ್ಯಮಂತ್ರಿ ಗದರಿಸಿ, ‘ಅತಿ ಬುದ್ಧಿವಂತರೊಂದಿಗೆ ಕೆಲಸ ಮಾಡುವುದು ಕಷ್ಟ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸಂಸದರು ಸ್ಪಷ್ಟನೆ ನೀಡಿದರು.

ಕ್ಷೇತ್ರದ ಅಭಿವೃದ್ಧಿಗೆ ನಾನು ಕೇಳಿದ್ದನ್ನೆಲ್ಲಾ ಕೊಟ್ಟ ಏಕೈಕ ಮುಖ್ಯಮಂತ್ರಿ ಅವರು. ಜನರ ಸೇವಕ ನಾನು. ಕಾಲಿಗೆ ಬಿದ್ದು, ಕೈ ಮುಗಿದು ಬೇಕಾದರೂ ಜನರ ಕೆಲಸ ಮಾಡಿಕೊಡುತ್ತೇನೆ. ಯಾವುದೋ ವರ್ಗಾವಣೆ, ಗುತ್ತಿಗೆಯ ಫೈಲ್ ತೆಗೆದುಕೊಂಡು ಹೋಗಿದ್ದಾಗ ಮುಖ್ಯಮಂತ್ರಿ ಸಿಡುಕಿದಿದ್ದಲ್ಲಿ ನನಗೆ ಅವಮಾನ ಆಗುತ್ತಿತ್ತು ಎಂದು ಹೇಳಿದರು.

RELATED ARTICLES

Related Articles

TRENDING ARTICLES