ಗದಗ : ನಿರಂತರ ಮಳೆಗೆ ಗದಗ ಜಿಲ್ಲೆಯ ಅನ್ನದಾತರ ಬದುಕು ಅಯೋಮಯವಾಗ್ತಿದೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು ಬೆಳೆ ರೋಗದಿಂದ ಹಾಳಾಗ್ತಿದೆ. ಹೆಸರು ಬೆಳೆಗೆ ಹಳದಿ ರೋಗ ಬಂದಿದೆ. ಸಾಕಷ್ಟು ಔಷಧ, ಗೊಬ್ಬರ ಸಿಂಪಡಣೆ ಮಾಡಿದ್ರೂ ಪ್ರಯೋಜನ ಆಗ್ತಿಲ್ಲ. ಪ್ರತಿ ಎಕರೆ ಬೆಳೆಗೆ ಹತ್ತಾರು ಸಾವಿರ ಖರ್ಚು ಮಾಡಿದ್ದೇವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.
ಇನ್ನೇನು ಕೆಲವು ದಿನಗಳಲ್ಲಿ ರೈತರು ಬೆಳೆ ಕಟಾವು ಮಾಡಬೇಕಿತ್ತು. ಅಷ್ಟರಲ್ಲೆ ಹಳದಿ ರೋಗ ಬೆಳೆಯನ್ನು ಸರ್ವನಾಶ ಮಾಡುತ್ತಿದೆ ಅಂತಿದ್ದಾರೆ ರೈತರು.
ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಕೈತಪ್ಪಿ ಹೋಗಿದೆ. ಮಳೆಯಿಂದ ಇಷ್ಟೆಲ್ಲಾ ಹಾನಿಯಾದ್ರೂ ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಇತ್ತ ತಿರುಗಿಯೂ ನೋಡ್ತಿಲ್ಲ. ಇನ್ನಾದರೂ ಸರ್ಕಾರ ಹಾಗೂ ಅಧಿಕಾರಿಗಳು ನೊಂದ ರೈತರ ಕಣ್ಣೀರು ಒರೆಸಲಿ ಎಂಬುದೇ ಎಲ್ಲರ ಆಶಯ.
ಮಹಲಿಂಗೇಶ್ ಹಿರೇಮಠ, ಪವರ್ ಟಿವಿ, ಗದಗ