ಮೈಸೂರು: ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್ ಸೇರುವಂತೆ ಕರೆದಿಲ್ಲ. ಜೆಡಿಎಸ್‌ನಲ್ಲಿ ಉಳಿದುಕೋ ಎಂದೂ ಹೇಳಿಲ್ಲ. ಆದರೆ, ಬಿಜೆಪಿಗೆ ಹೋಗಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ 2–3 ತಿಂಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಅಲ್ಲದೇ ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಹೀಗಾಗಿ, ಸುರಕ್ಷತೆ ಇರುವ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋತಿದ್ದರಿಂದಾಗಿ ಅಲ್ಲಿ ಮತ್ತೆ ಸ್ಪರ್ಧಿಸಲು ಅವರಿಗೆ ಆತಂಕವಿದೆ’ ಎಂದರು.
‘ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಹೇಳುವುದಿಲ್ಲ. 25 ವರ್ಷ ಅವರ ಜೊತೆಗೇ ಇದ್ದವನು ನಾನು. ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ನಾನೇ ಎಲ್ಲ ಅಭಿವೃದ್ಧಿಯನ್ನೂ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ. ಯಾರ‍್ಯಾರ ಕಾಲದಲ್ಲ ಏನೇನಾಗಿದೆ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದರು.
‘ಈಗಿನ ಶಾಸಕನಾದ ನಾನು ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎನ್ನುವ ನೋವು ಸಿದ್ದರಾಮಯ್ಯ ಅವರಿಗೆ ಇರಬಹುದು’ ಎಂದು ತಿಳಿಸಿದರು.