Wednesday, May 15, 2024

ದೇಶವನ್ನು ಉಳಿಸಲು ನಾವು ಬೀದಿಗಿಳಿಯ ಬೇಕು: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಬರೀ ಪಕ್ಷಕ್ಕಾಗುತ್ತಿರುವ ಅನ್ಯಾಯ ಮಾತ್ರವಲ್ಲ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದರು.

ಆರೋಗ್ಯವನ್ನು ಲೆಕ್ಕಿಸದೆ ಸೋನಿಯಾ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ಕಾಂಗ್ರೆಸ್, ಇಂದು ನಗರದ ಫ್ರೀಡ್ಂ ವ್ಯಾಪಕ ಪ್ರತಿಭಟನೆ ಹಮ್ಮಿಕೊಂಡಿತ್ತು. ಬಿಜೆಪಿ ದ್ವೇಷದ ರಾಜಕಾರಣವನ್ನು ಆರೋಪಿಸಿ ಕಾಂಗ್ರೆಸ್ ನಾಯಕರು ಪ್ರತಿಭಟಿಸಿದ್ದರು. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ದೇಶ ಮತ್ತು ಸಂವಿಧಾನವನ್ನು ಉಳಿಸಲು ನಾವು ಬೀದಿಗಿಳಿಯಲೇಬೇಕು. ವೈಯಕ್ತಿಕ ನಿಂದನೆ ಮತ್ತು ಅಧಿಕಾರದ ದುರುಪಯೋಗಕ್ಕೆ ಅಂಜದೆ ನ್ಯಾಯಕ್ಕಾಗಿ ನಮ್ಮ ಹೋರಾಟ ನಿರಂತರವಿರಲಿ. ದೇಶಕ್ಕಾಗಿ ಇನ್ನೊಂದು ಸುತ್ತಿನ ಸ್ವಾತಂತ್ರ್ಯ ಚಳವಳಿಗೆ ನಾವು ಸಿದ್ಧರಾಗೋಣ’ ಎಂದು ಕರೆ ನೀಡಿದರು.

‘ಸುಳ್ಳು ಮೊಕದ್ದಮೆ ದಾಖಲಿಸಿ, ತನಿಖೆ ನೆಪದಲ್ಲಿ ಕಿರುಕುಳ ನೀಡಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಹೋರಾಟದ ಹಾದಿಗೆ ಬೆನ್ನುತೋರಿಸುತ್ತಾರೆ ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ಬ್ರಿಟೀಷರ ಬಂದೂಕಿನ ನಳಿಕೆಗಳಿಗೆ ಎದೆಕೊಟ್ಟು ನಿಂತ ಪಕ್ಷ ನಮ್ಮದು. ನಿಮ್ಮಂತೆ ಕ್ಷಮಾದಾನಕ್ಕಾಗಿ ಅಂಗಲಾಚಿದವರಲ್ಲ’ ಎಂದು ಹೇಳಿದರು.

‘ಬಿಜೆಪಿ ಅವರು ಸರ್ವಾಧಿಕಾರ ಮತ್ತು ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟವರು. ಇದಕ್ಕಾಗಿಯೇ ಆರ್‌ಎಸ್‌ಎಸ್ ನಾಯಕರು ಹಿಟ್ಲರ್‌ ಅನ್ನು ಹಾಡಿ ಹೊಗಳಿದ್ದನ್ನು ಚರಿತ್ರೆಯಲ್ಲಿ ನಾವು ಕಾಣಬಹುದು. ಇವರು ಒಬ್ಬ ನಾಯಕ, ಒಂದು ಸಿದ್ಧಾಂತ ಮತ್ತು ಒಂದು ಚಿಹ್ನೆಯಲ್ಲಿ ನಂಬಿಕೆಯಿಟ್ಟವರು. ಇಂಥಾ ಚಿಂತನೆಗಳು ಬಹುತ್ವ ಭಾರತಕ್ಕೆ ಎಂದಿಗೂ ಅಪಾಯಕಾರಿ’ ಎಂದು ಟ್ವೀಟಿಸಿದ್ದಾರೆ.

RELATED ARTICLES

Related Articles

TRENDING ARTICLES