Monday, December 23, 2024

ವೆಬ್​​ಸೈಟ್​ನ ದುರುಪಯೋಗ: ಆರೋಪಿಗಳು ಅರೆಸ್ಟ್

ಬೆಂಗಳೂರು: ಎಲ್ಲದಕ್ಕೂ ಗೂಗಲ್‌ನ ಮೊರೆ ಹೋಗುವ ಮುನ್ನ ಎಚ್ಚರ.. ನೀವು ನಂಬುವುದೆಲ್ಲ ಸತ್ಯವಾಗಿರುವುದಿಲ್ಲ. ಗೂಗಲ್ ಸರ್ಚ್ ಇಂಜಿನ್‌ನ್ನೇ ಬಂಡವಾಳ‌ವಾಗಿಸಿಕೊಂಡು ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಪರನ್ ಸಿಂಗ್ ಚೌಹಾಣ್, ನರೇಂದ್ರ, ಧರ್ಮೇಂದರ್, ಹಾಗೂ ಧರ್ಮವೀರ್ ಬಂಧಿತ ಆರೋಪಿಗಳು. ವಾಹನ ಟ್ರಾನ್ಸ್‌ಪೋರ್ಟ್ ಮಾಡಲು ಗೂಗಲ್ ಸರ್ಚ್ ಸಹಾಯ ಪಡೆಯುತ್ತಿದ್ದವರೇ ಈ ಆರೋಪಿಗಳ ಟಾರ್ಗೆಟ್. ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಗೂಗಲ್‌ನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಜಾಹೀರಾತು ನೀಡುತ್ತಿದ್ದ ಆರೋಪಿಗಳು ಟ್ರಾನ್ಸ್‌ಪೋರ್ಟ್ ಮಾಡಲು ಮೊದಲು ಹಣ ಪಡೆಯುತ್ತಿದ್ದರು.

ಬಳಿಕ ವಾಹನ ತೆಗೆದುಕೊಂಡು ತಿಂಗಳು ಕಳೆದರೂ ಡೆಲಿವರಿ ಕೊಡದೇ ಕಳ್ಳಾಟವಾಡುತ್ತಿದ್ದರು. ಪ್ರಶ್ನೆ ಮಾಡಿದರೆ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬುಲೆಟ್ ಶಿಫ್ಟ್ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬರಿಂದ 4 ಸಾವಿರ ಶಿಫ್ಟಿಂಗ್ ಚಾರ್ಜ್ ಪಡೆದಿದ್ದ ಆರೋಪಿಗಳು 20 ದಿನದವರೆಗೂ ವಾಹನವನ್ನ ಹುಬ್ಬಳ್ಳಿಗೆ ತಲುಪಿಸಿರಲಿಲ್ಲ. ಪ್ರಶ್ನಿಸಿದಾಗ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳಿಗೆ ಹೆಚ್ಚು ಹಣ ನೀಡಿದರೂ ಬೈಕ್ ಡೆಲಿವರಿ ನೀಡದೇ ಅಸಲಿ ಟ್ರಾನ್ಸ್‌ಪೋರ್ಟ್‌ ಕಂಪನಿ ಮುಂದೆ ಬಿಟ್ಟು ಪರಾರಿಯಾಗಿದ್ದರು. ಬೈಕ್ ಮಾಲೀಕ ಹುಡುಕಿಕೊಂಡು ಬಂದಾಗ ವಂಚಕರ ಕೃತ್ಯ ಬಯಲಾಗಿತ್ತು.

ಆರೋಪಿಗಳಿಂದ ವಂಚನೆಗೊಳಗಾಗಿದ್ದ ವ್ಯಕ್ತಿ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

 

RELATED ARTICLES

Related Articles

TRENDING ARTICLES