Friday, November 22, 2024

ಸಿಎಂ ಬೊಮ್ಮಾಯಿ: ಕೆಆರ್​ಎಸ್​​ ಜಲಾಶಯಕ್ಕೆ 2ನೇ ಬಾರಿ ಬಾಗಿನ ಅರ್ಪಣೆ

ಮೈಸೂರು: ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಕಾವೇರಿ ಕಪಿಲೆ ಮೈದುಂಬಿ ಹರಿಯುತ್ತಿವೆ. ಹೀಗಾಗಿ ಸಿಎಂ ಬೊಮ್ಮಾಯಿ ಮೈಸೂರು, ಮಂಡ್ಯ ಜಿಲ್ಲಾ ಪ್ರವಾಸದಲ್ಲಿದ್ದು, ಧರ್ಮಪತ್ನಿಯೊಂದಿಗೆ ಮೊದಲು ನಾಡದೇವತೆ ಚಾಮುಂಡಿ ದರ್ಶನ ಪಡೆದು, ಬಳಿಕ ಜೀವನದಿ ಕಾವೇರಿ, ಹಾಗೂ ಕಪಿಲೆಗೆ ಸಂಪ್ರದಾಯದಂತೆ ಬಾಗಿನ ಅರ್ಪಿಸಿದರು. ಅಲ್ಲದೆ, ನಾಡದೇವತೆಯ ದರ್ಶನ ಪಡೆದರು.

ಚಾಮುಂಡೇಶ್ವರಿ ದೇವಿಯ ವರ್ಧಂತಿ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಅಮ್ಮನವರ ಜನ್ಮದಿನವೇ ಆಕೆಯ ದರ್ಶನ ಪಡೆಯಲು, ಭಕ್ತರು ಹೊತ್ತು ಮೂಡುವ ಮುನ್ನವೇ ಸರತಿ ಸಾಲಿನಲ್ಲಿ ನಿಂತಿದ್ದರು. ವರ್ಧಂತಿ ಪ್ರಯುಕ್ತ ಮುಂಜಾನೆಯಿಂದಲೇ ದೇವಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ ಮತ್ತು ಇತರ ಪೂಜಾ ಕೈಂಕರ್ಯಗಳು ನಡೆದವು.

ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು, ಮಂಡ್ಯ ಪ್ರವಾಸದಲ್ಲಿದ್ದು, ಪತ್ನಿ ಸಮೇತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಿಎಂ ನಾಡ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. ಅಭಿಷೇಕ, ಕುಂಕುಮಾರ್ಚನೆ ಸೇರಿ ವಿಶೇಷ ಪೂಜೆ ಸಲ್ಲಿಸಿ ವಜ್ರಾಭರಣಗಳಿಂದ ದೇವಿಯನ್ನು ಅತ್ಯಾಕರ್ಷಕವಾಗಿ ಅಲಂಕರಿಸಲಾಗಿತ್ತು. ಇದೇ ವೇಳೆ ಸಂಪ್ರದಾಯದಂತೆ ನಡೆದ ಚಾಮುಂಡೇಶ್ವರಿ ಪ್ರತಿಷ್ಠಾಪನೆಗೊಂಡಿರುವ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಮೈಸೂರು ರಾಜ ವಂಶಸ್ಥ ಯದುವೀರ್ ಹಾಗೂ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದ್ರು.

ಇನ್ನು, ರಾಜ್ಯದಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜೀವನದಿ ಕಾವೇರಿ, ಕಪಿಲೆ ನದಿಗಳು ಭೋರ್ಗರೆದು ಹರಿಯುತ್ತಿವೆ. ಹೀಗಾಗಿ ಆಷಾಢ ಮಾಸದಲ್ಲೂ ಕೂಡ ರಾಜ್ಯದ ಸಿಎಂ ಬೊಮ್ಮಾಯಿ ಮಂಡ್ಯದ KRS ಅಣೆಕಟ್ಟೆ ಹಾಗೂ ಮೈಸೂರಿನ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ಪತ್ನಿ ಸಮೇತ ತೆರಳಿ ಜಲಾಶಯಗಳಿಗೆ ಬಾಗಿನ ಸಮರ್ಪಣೆ ಮಾಡಿದ್ರು.

8 ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಬಾಗಿನ ಅರ್ಪಣೆ :

KRS ಡ್ಯಾಂ ಇತಿಹಾಸದಲ್ಲಿ ಯಾವ ಸಿಎಂಗೂ ಸಿಗದ ಅದೃಷ್ಟ ಬಸವರಾಜ ಬೊಮ್ಮಾಯಿಗೆ ಸಿಕ್ಕಿದ್ದು, ಕೇವಲ 8 ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಬಾಗಿನ ಅರ್ಪಣೆ ಮಾಡಿದ್ದಾರೆ. ಸಾಮಾನ್ಯವಾಗಿ ಆಗಸ್ಟ್​ನಲ್ಲಿ ಭರ್ತಿಯಾಗುತ್ತಿದ್ದ KRS ಡ್ಯಾಂ ಈ ವರ್ಷ ಜುಲೈನಲ್ಲೇ ಕನ್ನಂಬಾಡಿ ಕಟ್ಟೆ ಭರ್ತಿಯಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ 2 ಬಾರಿ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಸಿಎಂ ಬೊಮ್ಮಾಯಿ ಪಾತ್ರವಾಗಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಭರ್ತಿಯಾಗಿದ್ದ ಡ್ಯಾಂಗೆ ನವೆಂಬರ್ 2 ರಂದು ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು.

ಇನ್ನು, ಇದೇ ವೇಳೆ ಮಾತನಾಡಿದ ಸಿಎಂ, ಕಬಿನಿಯಲ್ಲಿ102 ಕಿ.ಮೀ. ನಾಲೆ ಅಭಿವೃದ್ಧಿ ಮಾಡಿದ್ದೇವೆ, ಶೀಘ್ರದಲ್ಲೇ ಕಬಿನಿಯಲ್ಲಿ ಗಾರ್ಡನ್ ಮಾಡ್ತೀವಿ ಎಂದು ಭರವಸೆ ನೀಡಿದ್ರು.

ಒಂದು ಕಡೆ ತುಂಬಿ ಹರಿಯುತ್ತಿರೋ ನದಿಗಳಿಗೆ ಬಾಗಿನ ಸಮರ್ಪಣೆಯಾದ್ರೆ, ಮತ್ತೊಂದು ಕಡೆ ಮುಂಜಾನೆಯಿಂದಲೇ ಮೈಸೂರಿನ ಪುರದೇವತೆ ಚಾಮುಂಡೇಶ್ವರಿಯ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಮಂಡ್ಯದಿಂದ ರವಿ ಲಾಲಿಪಾಳ್ಯ ಜೊತೆ ಸುರೇಶ್ ಬಿ, ಪವರ್ ಟಿವಿ, ಮೈಸೂರು

RELATED ARTICLES

Related Articles

TRENDING ARTICLES