Monday, May 20, 2024

ಅರಣ್ಯ ಇಲಾಖೆಯಲ್ಲಿ ಭಾರೀ ಗೋಲ್​ಮಾಲ್

ಧಾರವಾಡ: ಇದೇನಿದ್ರೂ ಲಂಚ ಕೊಟ್ರಷ್ಟೇ ಕೆಲಸ ಆಗೋ ಕಾಲ. ಈ ಲಂಚಬಾಕತನ ಯಾವ ಇಲಾಖೆಯನ್ನೂ ಬಿಟ್ಟಿಲ್ಲ. ಇದಕ್ಕೆ ಧಾರವಾಡದ ಅರಣ್ಯ ಇಲಾಖೆ ಸ್ಪಷ್ಟ ನಿದರ್ಶನ. ಇಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ಮಾಡುತ್ತಿರುವ 15 ಜನರಿಗೆ ನೀಡಲಾಗಿದ್ದ ಮುಂಬಡ್ತಿ ಆದೇಶವನ್ನು ವಾಪಸ್ ಪಡೆದಿದ್ದು, ಅರಣ್ಯ ರಕ್ಷಕರು ಇದೀಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ಕಹಳೆ ಮೊಳಗಿಸಿದ್ದಾರೆ.

ಮೇ 23 ರಂದು 15 ಜನ ಅರಣ್ಯ ರಕ್ಷಕರಿಗೆ ಮುಂಬಡ್ತಿ ನೀಡಿ ಸಿಸಿಎಫ್ ಮನೋಜ್ ತಿವಾರಿ ಆದೇಶ ಹೊರಡಿಸಿದ್ದರು. ಅರಣ್ಯ ರಕ್ಷಕರಾಗಿದ್ದ 15 ಜನರಿಗೆ ಉಪ ವಲಯ ಅರಣ್ಯಾಧಿಕಾರಿಯಾಗಿ ಮುಂಬಡ್ತಿ ನೀಡಿದ್ದರು. ಈ ವೇಳೆ ಸಿಸಿಎಫ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮೊಹ್ಮದ್ ಶರೀಫ್ ಬೂದಿಹಾಳ ಎಂಬಾತ 15 ಜನ ಅರಣ್ಯ ರಕ್ಷಕರಿಗೂ ಫೋನ್ ಮಾಡಿ ನೀವು ತಲಾ 30 ಸಾವಿರ ಕೊಡಬೇಕು. ಇಲ್ಲದೇ ಹೋದರೆ ನಿಮಗೆ ಮುಂಬಡ್ತಿ ನೀಡಲಾಗುವುದಿಲ್ಲ. ಮುಂಬಡ್ತಿಯನ್ನ ವಾಪಸ್ ಪಡೆಯಲಾಗುವುದು ಎಂದು ಬೆದರಿಸಿ ತಲಾ 30 ಸಾವಿರ ಪಡೆದಿದ್ದಾರೆ. ಇದಾದ ಬಳಿಕ ಹಣ ಕೊಟ್ಟರೂ ಮುಂಬಡ್ತಿ ಆದೇಶ ರದ್ದು ಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಕಚೇರಿಯ ಮೊಹ್ಮದ್ ಬೂದಿಹಾಳ ಅರಣ್ಯ ರಕ್ಷಕರಿಂದ ತಲಾ 30 ಸಾವಿರ ಹಣ ಪಡೆದಿದ್ದರೂ ಸಿಸಿಎಫ್ ಅವರು ಈ ಬಗ್ಗೆ ಯಾವುದೇ ಗಂಭೀರ ಕ್ರಮ ಜರುಗಿಸಿಲ್ಲ. ಈ ಎಲ್ಲ ವಿಷಯವನ್ನು ಸಿಬ್ಬಂದಿ ಸಿಸಿಎಫ್ ಅವರ ಗಮನಕ್ಕೂ ತಂದಿದ್ದಾರೆ. ಇದು ಸಿಸಿಎಫ್ ಅವರಿಗೆ ಗೊತ್ತಾಗದಂತೆ ನಡೆದಿದೆಯೋ ಅಥವಾ ಗೊತ್ತಿದ್ದೂ ನಡೆದಿದೆಯೋ ಗೊತ್ತಿಲ್ಲ. ಆದರೆ, ಅವರು ಮಾತ್ರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಮುಂಬಡ್ತಿ ಆದೇಶವನ್ನು ಪರಿಷ್ಕರಿಸಲು ಕೋರಿದ್ದರ ಮೇರೆಗೆ ಮುಂಬಡ್ತಿ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದು, ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಒಟ್ಟಾರೆ, ಮೇಲಾಧಿಕಾರಿಗಳ ಹಣದ ದಾಹದಿಂದ ಅರಣ್ಯ ರಕ್ಷಕರು, ಹಣ ಕಳೆದುಕೊಂಡು ಬಡ್ತಿಯೂ ಸಿಗದೇ ಅತಂತ್ರರಾಗಿದ್ದಾರೆ. ಹೀಗಾಗಿ ತಮಗೆ ಮುಂಬಡ್ತಿ ನೀಡಲೇಬೇಕು ಎಂದು ಅರಣ್ಯ ರಕ್ಷಕರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿ, ಸಿಸಿಎಫ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮುಸ್ತಫಾ ಕುನ್ನಿಭಾವಿ.ಪವರ್ ಟಿ.ವಿ.ಧಾರವಾಡ

RELATED ARTICLES

Related Articles

TRENDING ARTICLES