Monday, December 23, 2024

ಶವ ಹೊರುವುದಕ್ಕೂ ಜಿಎಸ್‌ಟಿ ವಿಧಿಸುವ ದಿನ ದೂರವಿಲ್ಲ: ಯು.ಟಿ.ಖಾದರ್‌

ಮಂಗಳೂರು: ಶವ ಹೊರುವುದಕ್ಕೂ ತೆರಿಗೆ ವಿಧಿಸುವ ದಿನ ದೂರವಿಲ್ಲ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್‌ ಕಳವಳ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ‘ಜನರನ್ನು ಸರ್ಕಾರ ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಿಲ್ಲ. ಆಡಳಿತ ವ್ಯವಸ್ಥೆ ಹಾಗೂ ಜನರ ನಡುವೆ ಅಂತರ ಹೆಚ್ಚುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಜನರ ಕಷ್ಟಗಳು ಸರ್ಕಾರಕ್ಕೆ ಮನವರಿಕೆ ಆಗುತ್ತಿಲ್ಲ. ಬಿಜೆಪಿ ಆಡಳಿತಾಧಿಯಲ್ಲಿ ಜಾರಿಗೊಳಿಸಿದ ಜಿಎಸ್‌ಟಿಯನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಗಬ್ಬಾರ್‌ ಸಿಂಗ್‌ ಟ್ಯಾಕ್ಸ್‌ ಎಂದು ಟೀಕಿಸಿದ್ದರು. ಆಗ ಜನ ಅವರನ್ನೇ ಲೇವಡಿ ಮಾಡಿದ್ದರು. ಜನರಿಗೂ ಈ ತೆರಿಗೆ ವ್ಯವಸ್ಥೆಯ ಕರಾಳತೆ ಈಗ ಅರ್ಥವಾಗುತ್ತಿದೆ’ ಎಂದು ತಿಳಿಸಿದರು.

ಅಲ್ಲದೇ ಸಂಸ್ಕೃತಿ ಹಾಗೂ ಮಾನವೀಯತೆ ಆಧಾರದಲ್ಲಿ ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಬಿಜೆಪಿಯು ಕೇವಲ ತೆರಿಗೆ ಆಧಾರದಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಮೊಸರು, ಮಜ್ಜಿಗೆ, ವಿದ್ಯಾರ್ಥಿಗಳು ಬಳಸುವ ಪೆನ್ಸಿಲನ್ನೂ ಬಿಡದೆ ತೆರಿಗೆ ಹಾಕಲಾಗಿದೆ. ಅಕ್ಕಿಗೆ ತೆರಿಗೆ ಕಟ್ಟಿ, ಮಂಡಕ್ಕಿಗೆ ಪ್ರತ್ಯೇಕ ತೆರಿಗೆ ನೀಡಬೇಕಿದೆ.

ಇನ್ನು ದೇಶದಲ್ಲೇ ಅತ್ಯಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಶೇ 42ರಷ್ಟು ಜಿಎಸ್‌ಟಿ ಪಾಲು ನೀಡದೇ ವಂಚಿಸಲಾಗುತ್ತಿದೆ. ಆದರೂ, ಆಡಳಿತ ಪಕ್ಷದ 25 ಸಂಸದರು ಚಕಾರ ಎತ್ತುತ್ತಿಲ್ಲ’ ಎಂದು ಬೇಸರಗೊಂಡರು.

ಸಮರ್ಥ ಆಡಳಿತ ನೀತಿಯ ಕೊರತೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಈಗಲೂ ಜನ ಎಚ್ಚೆತ್ತುಕೊಂಡು ಪಾಠ ಕಲಿಸದಿದ್ದರೆ ಉಳಿಗಾಲವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್‌ ವಸೂಲಿ, ಪಿಎಸ್‌ಐ ನೇಮಕಾತಿ ಹಗರಣ, ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ಹೇರಿರುವುದು ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ರಾಜ್ಯ ಮಟ್ಟದಲ್ಲಿ ಇದೇ 22ರಂದು ಹಾಗೂ ಜಿಲ್ಲಾ ಮಟ್ಟದಲ್ಲಿ ಇದೇ 25ರಂದು ಪ್ರತಿಭಟನೆ ನಡೆಸಲಿದೆ’ ಎಂದರು.

RELATED ARTICLES

Related Articles

TRENDING ARTICLES