Monday, December 23, 2024

ರಾಷ್ಟ್ರಧ್ವಜದ ವಿಷಯದಲ್ಲಿ ‘ಮೇಕ್ ಇನ್ ಚೀನಾ’ಎನ್ನುತ್ತಿರುವ ಮೋದಿ: ನಲಪಾಡ್ ಕಿಡಿ

ಹುಬ್ಬಳ್ಳಿ: ಎಲ್ಲಾ ವಸ್ತುಗಳ ವಿಷಯದಲ್ಲಿ ಮೇಕ್‌ ಇನ್‌ ಇಂಡಿಯಾ ಎನ್ನುವ ಪ್ರಧಾನಿ ನರೇಂದ್ರ ಮೋದಿ‌ ಅವರು, ದೇಶದ ಅಸ್ಮಿತೆಯಾದ ರಾಷ್ಟ್ರಧ್ವಜದ ವಿಷಯದಲ್ಲಿ ಮೇಕ್ ಇನ್ ಚೀನಾ ಎನ್ನುತ್ತಿದ್ದಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ನಗರದದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆವರಣದಲ್ಲಿರುವ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ‘ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ, ನಮ್ಮ ನೆಲದ ಖಾದಿಗೆ ಮೋದಿ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಾಧನವಾಗಿದ್ದ ಖಾದಿ, ಬ್ರಿಟಿಷರನ್ನು ದೇಶದಿಂದ ಓಡಿಸುವ ದೊಡ್ಡ ಅಸ್ತ್ರವಾಗಿಯೂ ಬಳಕೆಯಾಗಿತ್ತು. ಹೊಸ ತಿದ್ದುಪಡಿಯು, ಪರಂಪರಾಗತ ಖಾದಿ ರಾಷ್ಟ್ರಧ್ವಜಕ್ಕೆ ಕುತ್ತು ತಂದಿದೆ.‌ ಇಷ್ಟಕ್ಕೂ ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ’ ಎಂದರು.

ಇನ್ನು ‘ಪಾಲಿಸ್ಟರ್‌ ಧ್ವಜಕ್ಕೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಮಾರಾಟವಾಗದೆ ಉಳಿದಿರುವ ಧ್ವಜಗಳನ್ನು ಕಾಂಗ್ರೆಸ್ ಪಕ್ಷವು ಖರೀದಿಸಲಿದೆ. ಜೊತೆಗೆ, ಖಾದಿ ಗ್ರಾಮೋದ್ಯೋಗವನ್ನು ಉಳಿಸಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ’ ಎಂದು ಹೇಳಿದರು.

‘ನಮ್ಮ ರಾಷ್ಟ್ರಧ್ವಜವನ್ನು ನಮ್ಮ ದೇಶದಲ್ಲಿ ಮಾತ್ರ ತಯಾರಿ‌ಸಲು ಅವಕಾಶ‌ ನೀಡದೆ ದೊಡ್ಡ ಅಪಮಾನ ಮಾಡಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡಬಾರದು. ಕೇಂದ್ರ ಸರ್ಕಾರ‌ ಕೂಡಲೇ ತಿದ್ದುಪಡಿ ‌ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES