Wednesday, January 22, 2025

ತಮಿಳುನಾಡಿನಲ್ಲಿ ಅಪ್ಪು ಮಾನವೀಯತೆಗೆ ಪ್ರಶಸ್ತಿಯ ಗರಿ

ಕಾಣದಂತೆ ಮಾಯವಾಗಿ, ದೇವರಂತೆ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದುಹೋಗಿರೋ ರಾಜರತ್ನ ಅಪ್ಪು, ಇದೀಗ ದೇವರಾಗಿಯೇ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. ಅಷ್ಟೇ ಅಲ್ಲ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಜೊತೆ ಅಪ್ಪು ಡ್ಯಾನ್ಸ್ ಕಣ್ಣಿಗೆ ಪರಮಾನಂದ. ಇನ್ನು ತಮಿಳುನಾಡಿನಲ್ಲಿ ಅಪ್ಪು ಮಾನವೀಯತೆಗೆ ಪ್ರಶಸ್ತಿ ಕೂಡ ಲಭಿಸಿರೋದು ಹೆಮ್ಮೆಯ ವಿಷ್ಯ.

ಅಬ್ಬಬ್ಬಾ.. ಪುನೀತ್- ಪ್ರಭುದೇವ ಡ್ಯಾನ್ಸ್ ಪರಮಾನಂದ

ಇಂಡಿಯನ್ ಮೈಕಲ್ ಜಾಕ್ಸನ್- ಅಪ್ಪು ಪವರ್​ಫುಲ್ ಹೆಜ್ಜೆ

ತಮಿಳುನಾಡಿನಲ್ಲಿ ಅಪ್ಪು ಮಾನವೀಯತೆಗೆ ಪ್ರಶಸ್ತಿಯ ಗರಿ

ಅಪ್ಪು ದಂಪತಿ ಬಗ್ಗೆ ಆರ್ಯ ಹೇಳಿದ್ರು ಅಚ್ಚರಿಯ ಪ್ರಸಂಗ

ವಿಶ್ವ ಸಿನಿದುನಿಯಾದಲ್ಲಿ ಡ್ಯಾನ್ಸ್ ಅಂದಾಕ್ಷಣ ನೆನಪಾಗೋದೇ ಗಾಡ್ ಆಫ್ ಡ್ಯಾನ್ಸ್ ಮೈಕಲ್ ಜಾಕ್ಸನ್. ಆದ್ರೆ ಅದು ನಮ್ಮ ಇಂಡಿಯನ್ ಇಂಡಸ್ಟ್ರಿ ವಿಚಾರಕ್ಕೆ ಬಂದ್ರೆ ಡ್ಯಾನ್ಸ್ ಕಿಂಗ್ ಪ್ರಭುದೇವ. ಸೌತ್ ದುನಿಯಾ ಅಂದ್ರೆ ಒನ್ ಅಂಡ್ ಓನ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಹೀಗಿರುವಾಗ ಅಪ್ಪು- ಪ್ರಭುದೇವ ಇಬ್ರೂ ಒಟ್ಟಿಗೆ ಹೆಜ್ಜೆ ಹಾಕಿದ್ರೆ ಸ್ಕ್ರೀನ್ ಹೇಗಿರಬೇಡ ನೀವೇ ಊಹಿಸಿಕೊಳ್ಳಿ.

ನಿರ್ದೇಶಕ ನಾಗೇಂದ್ರ ಪ್ರಸಾದ್ ತಮ್ಮ ಲಕ್ಕಿಮ್ಯಾನ್ ಚಿತ್ರದಲ್ಲಿ ಸದ್ಯ ಈ ಇಬ್ಬರೂ ಲೆಜೆಂಡ್​ಗಳು ಒಟ್ಟೊಟ್ಟಿಗೆ ಸ್ಟೆಪ್ ಹಾಕೋ ಹಾಡಿನ ಮೇಕಿಂಗ್ ವಿಡಿಯೋ ಒಂದನ್ನ ರಿವೀಲ್ ಮಾಡಿದ್ದಾರೆ. ಇದು ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಇವರಿಬ್ಬರೂ ಒಂದೇ ತರಹ ಮೈಕೈ ಕುಣಿಸೋದನ್ನ ನೋಡೋಕೆ ಎರಡು ಕಣ್ಣು ಸಾಲಲ್ಲ. ಲ್ಯಾವಿಶ್ ಆಗಿರೋ ಕಲರ್​ಫುಲ್ ಸೆಟ್​ನಲ್ಲಿ P2 ಡ್ಯಾನ್ಸ್ ನಿಜಕ್ಕೂ ಅದ್ಭುತ, ಅಮೋಘ, ಅದ್ವಿತೀಯ.

ಅಂದಹಾಗೆ ಇವರಿಬ್ಬರೂ ಈ ಸಿನಿಮಾದಲ್ಲಿ ಜಸ್ಟ್ ಗೆಸ್ಟ್ ಅಪಿಯರೆನ್ಸ್ ಅಷ್ಟೇ. ಅದ್ರಲ್ಲೂ ಅಪ್ಪು ಅಂತೂ ದೇವರಾಗಿಯೇ ದರ್ಶನ ನೀಡಲಿದ್ದಾರೆ. ಇದು ತಮಿಳಿನ ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್​ಟೈನರ್ ಓ ಮೈ ಕಡವುಲೇ ರಿಮೇಕ್. ಅಲ್ಲಿ ವಿಜಯ್ ಸೇತುಪತಿ ಮಾಡಿದ ಪಾತ್ರವನ್ನ ಇಲ್ಲಿ ಅಪ್ಪು ನಿರ್ವಹಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಲೀಡ್​ನಲ್ಲಿರೋ ಈ ಸಿನಿಮಾದಲ್ಲಿ ಕೃಷ್ಣ ಜೊತೆ ಪುನೀತ್ ಗಾಡ್ ಆಗಿ ಕಾಣಸಿಗಲಿದ್ದಾರೆ. ಸದ್ಯದಲ್ಲೇ ಲಕ್ಕಿಮ್ಯಾನ್ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ಆಗಸ್ಟ್​ನಲ್ಲಿ ತೆರೆಗೆ ಬರೋ ಸಾಧ್ಯತೆಯಿದೆ.

ಉಸಿರು ಹೋದರೂ ಹೆಸರಿರಬೇಕು, ಜನರ ಮನದಲ್ಲಿ ಹಚ್ಚ ಹಸಿರಾಗಿ ನೆಲೆಸಿರಬೇಕು ಅಂದ್ರೆ ಆ ವ್ಯಕ್ತಿ ತನ್ನ ಸಾಮರ್ಥ್ಯಕ್ಕೂ ಮೀರಿ ಏನಾದ್ರು ಮಾಡಿರಬೇಕು. ಯೆಸ್.. ದೊಡ್ಮನೆ ಹುಡ್ಗ ಪುನೀತ್ ರಾಜ್​ಕುಮಾರ್ ಬರೀ ತೆರೆಮೇಲಷ್ಟೇ ಹೀರೋ ಆಗದೆ, ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿ, ಒಂದಷ್ಟು ಮಂದಿಗೆ ರೋಲ್ ಮಾಡೆಲ್ ಆದವ್ರು. ಹಾಗಾಗಿಯೇ ಅವ್ರ ಮಾನವೀಯತೆಗೆ ತಮಿಳುನಾಡಿನಲ್ಲಿ ಒಂದಲ್ಲಾ ಎರಡೆರಡು ಪ್ರಶಸ್ತಿಗಳು ಲಭಿಸಿವೆ.

ಗಲಾಟ ಕ್ರೌನ್ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ನೆರವೇರಿತು. ಅದರಲ್ಲಿ ಅಪ್ಪು ಸ್ಮರಣಾರ್ಥ ಎರಡು ಪ್ರಶಸ್ತಿಗಳನ್ನ ನೀಡಲಾಯ್ತು. ಪುನೀತ್ ರಾಜ್​ಕುಮಾರ್ ಹೆಸರಲ್ಲಿ ವರ್ಷದ ಅತ್ಯದ್ಭುತ ನಟ ಪ್ರಶಸ್ತಿಯನ್ನು ಆರ್ಯಗೆ ನೀಡಲಾಯಿತು. ಅವ್ರಿಗೆ ಪ್ರಶಸ್ತಿಯನ್ನ ಅಪ್ಪು ಅರ್ಧಾಂಗಿ ಅಶ್ವಿನಿ ಪುನೀತ್ ರಾಜ್​ಕುಮಾರ್ ನೀಡಿ ಗೌರವಿಸಿದ್ರು. ಇತ್ತ ಯುವರತ್ನ ಚಿತ್ರದಲ್ಲಿನ ಅಭಿನಯಕ್ಕಾಗಿ ಡಾ. ಪುನೀತ್ ರಾಜ್​ಕುಮಾರ್ ಪ್ರಶಸ್ತಿಯನ್ನ ಅಶ್ವಿನಿ ಅವ್ರಿಗೆ ನಟ ಆರ್ಯ ಹಾಗೂ ಎಸ್​ಜೆ ಸೂರ್ಯ ನೀಡಿ ಗೌರವಿಸಿದ್ದು ವಿಶೇಷ.

ಇದೇ ಸಂದರ್ಭದಲ್ಲಿ ಅಪ್ಪು ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ನಟ ಆರ್ಯ, ಅಶ್ವಿನಿ ಅವ್ರು ಬ್ರೇವ್ ಅಂಡ್ ಸ್ಟ್ರಾಂಗ್ ವ್ಯಕ್ತಿ. ಅಪ್ಪು ಮೇಲಿನ ಪ್ರೀತಿಗಾಗಿಯೇ ಇಲ್ಲಿಗೆ ಬಂದಿದ್ದಾರೆ. ಅಪ್ಪು ಡ್ಯಾನ್ಸ್, ಜಿಮ್, ಆ್ಯಕ್ಟಿಂಗ್, ಫೈಟ್ ಎಲ್ಲದ್ರಲ್ಲೂ ಸಾಮರ್ಥ್ಯವುಳ್ಳ ಎನರ್ಜಿಟಿಕ್ ಪರ್ಸನ್ ಅಂತ ಕೊಂಡಾಡಿದ್ರು. ಜೊತೆಗೆ ಬೆಂಗಳೂರಿನ ಅಪ್ಪು ನಿವಾಸಕ್ಕೆ ಆಗಮಿಸಿದ್ದ ಆರ್ಯ ಹಾಗೂ ಸ್ನೇಹಿತರಿಗೆ ದಂಪತಿಯೇ ಸ್ವತಃ ಅಡುಗೆ ಮಾಡಿ ಬಡಿಸಿದ ಪ್ರಸಂಗ ನೆನೆದು ಭಾವುಕರಾದ್ರು.

ಇದು ನಿಜಕ್ಕೂ ರಾಜಕುಮಾರನ ಬಣ್ಣಿಸಲಾಗದ ವ್ಯಕ್ತಿತ್ವದ ಕೈಗನ್ನಡಿ. ಅಣ್ಣಾವ್ರನ್ನೇ ಮೀರಿಸೋ ರೇಂಜ್​ಗೆ ಜನರ ಮನದಲ್ಲಿ ಅಪ್ಪು ಉಳಿಯೋಕೆ ಇಂತಹ ಘಟನೆಗಳೇ ಕಾರಣ ಅನಿಸುತ್ತೆ. ಅದೇನೇ ಇರಲಿ, ಅಪ್ಪು ಬರೀ ವ್ಯಕ್ತಿ ಅಲ್ಲ, ಅದೊಂದು ಶಕ್ತಿ. ಸ್ಫೂರ್ತಿಯ ಸೆಲೆ. ಯೂತ್ ಐಕಾನ್. ಮಾನವೀಯತೆಯ ನೆರಳು. ಕನ್ನಡದ ಮರೆಯಲಾಗದ ಮಾಣಿಕ್ಯ. ಅವ್ರಿಲ್ಲ ಅನ್ನೋ ಮಾತೇ ಇಲ್ಲ. ಕನ್ನಡಿಗರ ಮನದಲ್ಲಿ ಅವ್ರು ಸದಾ ಅಜರಾಮರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES