ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕನಸಿನ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ರಾಗಿಗುಡ್ಡದಲ್ಲಿ ಯೋಜನೆಯ ಸರ್ವೆಗೆ ಈಶ್ವರಪ್ಪ ತೆರಳಿದ್ರು. ಈ ವೇಳೆ, ಈ ಯೋಜನೆಗೆ ವಿರೋಧ ವ್ಯಕ್ತವಾಗಿದ್ದು, ಇಲ್ಲಿ ಪ್ರವಾಸೋದ್ಯಮದ ಅವಶ್ಯಕತೆ ಇಲ್ಲ ಅಂತಿದ್ದಾರೆ ಸ್ಥಳಿಯರು. ಅಷ್ಟಕ್ಕೂ ಯಾಕೆ ಈ ವಿರೋಧ? ಈಶ್ವರಪ್ಪ ಅವರ ಕನಸಿನ ಯೋಜನೆಯಾದ್ರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕನಸಿನ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಅಂದಹಾಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಿ, ರಾಜ್ಯದ ಜನರ ಗಮನ ಸೆಳೆಯುವ ಉದ್ದೇಶದಿಂದ 74 ಅಡಿ ಎತ್ತರದ ದೇವಾಲಯ ನಿರ್ಮಾಣ ಮತ್ತು 12 ಜ್ಯೋತಿರ್ಲಿಂಗಗಳ ಸ್ಥಾಪನೆ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜಿಸಲಾಗಿತ್ತು. ಈ ಯೋಜನೆ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆಗೆ ಕೆ.ಎಸ್. ಈಶ್ವರಪ್ಪ ಸರ್ವೇಗೆ ತೆರಳಿದ್ದರು. ಈ ವೇಳೆ ರಾಗಿಗುಡ್ಡ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಇಲ್ಲಿ ಹಲವಾರು ವರ್ಷಗಳಿಂದ ಅರ್ಚಕ ವೃತ್ತಿ ಮಾಡಿಕೊಂಡು ಬಂದಿರುವ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪುರಾತನ ದೇವಾಲಯ ಕೆಡವಬಾರದು, ಜೊತೆಗೆ ತಮ್ಮನ್ನು ಇಲ್ಲಿಂದ ಜಾಗ ಖಾಲಿ ಮಾಡಿಸಬಾರದೆಂದು ಆಗ್ರಹಿಸಿದರು. ಈಗಾಗಲೇ, ಇಲ್ಲಿನ ಸುಮಾರು 2 ಎಕರೆ ದೇವಾಲಯದ ಜಾಗದ ವಿಚಾರ ನ್ಯಾಯಾಲಯದಲ್ಲಿದ್ದು, ಯಾವುದೇ ಕಾರ್ಯವಾಗಬಾರದೆಂದು ಆಗ್ರಹಿಸಿದರು.
ರಾಗಿಗುಡ್ಡದಲ್ಲಿ ಈಗ ಪುರಾತನ ದೇವಾಲಯವಾದ ವೆಂಕಟರಮಣ ದೇವಾಲಯವಿದ್ದು, ಇದನ್ನು ಉಳಿಸಿಕೊಂಡೇ, 74 ಅಡಿಯ ಈಶ್ವರ ಲಿಂಗ ದೇವಾಲಯ ಮತ್ತು 12 ಜ್ಯೋತಿರ್ಲಿಂಗ ಸ್ಥಾಪನೆ ಮಾಡಿ, ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಶಿವಮೊಗ್ಗದ ಅಭಿವೃದ್ಧಿ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದ್ದು, ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅರ್ಚಕರ ಕುಟುಂಬ ವಿರೋಧ ವ್ಯಕ್ತಪಡಿಸಿದರೆ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಗಿಗುಡ್ಡವನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ದೇವಸ್ಥಾನದ ಮೂಲ ರೂಪಕ್ಕೆ ಈ ಯೋಜನೆಯಿಂದ ಧಕ್ಕೆ ಉಂಟಾಗುತ್ತದೆ ಎಂಬ ಆರೋಪ ಎದುರಾಗಿದೆ. ಇದೀಗ ಯೋಜನೆ ಕೈಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅರ್ಚಕರ ಕುಟುಂಬ ಎಚ್ಚರಿಕೆ ನೀಡಿದ್ದು, ಇದನ್ನು ಜಿಲ್ಲಾಧಿಕಾರಿಗಳು ಯಾವರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.
ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ