ಹಾಸನ: ದಂತಚೋರರ ಬೆನ್ನಿಗೆ ನಿಂತು ಕೋರ್ಟ್ನಿಂದ ಆರೋಪಿಗಳಿಗೆ ಬೇಲ್ ಕೊಡಿಸಿದ್ದಾರೆಂಬ ಗಂಭೀರ ಆರೋಪವೊಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಕೇಳಿಬಂದಿದೆ. ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆಯೋ ಮೂಲಕ ಆರೋಪ ಮಾಡಲಾಗಿದೆ. ಅಷ್ಟಕ್ಕೂ ಪ್ರಕರಣ ಯಾವುದು? ಈ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಏನ್ ಹೇಳ್ತಾರೆ..?
ಮಾರ್ಚ್ 19ರಂದು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸರಿಗೆ ಹಾಸನ ತಾಲೂಕಿನ ವೀರಾಪುರ ಗ್ರಾಮದ ಚಂದ್ರೇಗೌಡ ಹಾಗೂ ತಮ್ಮಯ್ಯ ಎಂಬ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ರು. ಪೊಲೀಸರು ಆರೋಪಿಗಳನ್ನ ಸ್ಥಳ ಮಹಜರ್ ಅಂತಾ ಕರೆದುಕೊಂಡು ಬಂದು, ಆನೆ ಕೊಂದು ಹೂತಿಟ್ಟಿದ್ದ ಜಾಗವನ್ನೂ ಪರಿಶೀಲಿಸಿದ್ರು. ಬಳಿಕ ಹೂತಿಟ್ಟಿದ್ದ ಜಾಗದಿಂದ ಕಾಡಾನೆ ಶವವನ್ನ ಹೊರತೆಗೆದು ಅಂತ್ಯ ಸಂಸ್ಕಾರವನ್ನೂ ನಡೆಸಿದ್ದರು. ಈ ವೇಳೆ ಸ್ಥಳಿಯ ಅರಣ್ಯ ಇಲಾಖೆಯೂ ಒಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಾ ಇದ್ರು. ಹೀಗಿರೋವಾಗ್ಲೇ ಪ್ರಕರಣದ ಬಗ್ಗೆ ಕೆಲವು ಆರೋಪಗಳನ್ನ ಮಾಡಿ, ಸೂಕ್ತ ತನಿಖೆ ನಡೆಸುವಂತೆ ಸಂಸದೆ ಮನೇಕಾ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದಿರೋ ಪತ್ರದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರು ಸಿ.ಕೆ.ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಕೇಸನ್ನ ಹಾಸನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದಾರೆ. ಈ ಕೇಸ್ ಆರೋಪಿಗಳು ಪ್ರಜ್ವಲ್ ರೇವಣ್ಣನ ಬೆಂಬಲಿಗರು. ಆರೋಪಿಗಳಿಗೆ ಬೇಲ್ ಕೊಡಿಸಿ ಎಂದು ಸಂಸದರು ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ RFO ಕೂಡ ಪ್ರಯತ್ನ ಮಾಡುತ್ತಿದ್ದಾರೆಂದು ಪತ್ರದಲ್ಲಿ ಮನೇಕಾ ಗಾಂಧಿ ಉಲ್ಲೇಖಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ, ಮನೇಕಾ ಗಾಂಧಿಯವರು ಹಿರಿಯರು, ಸಂಸದರು, ಅವರು ಪೂರ್ತಿ ಮಾಹಿತಿ ಪಡೆದು ಮಾತನಾಡಬೇಕಿತ್ತು ಎಂದರು. ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ. ನಿಮ್ಮದೇ ಸರ್ಕಾರ ಅಧಿಕಾರದ್ದಲ್ಲಿದೆ. ನನ್ನ ಸಿಡಿಆರ್ ಬೇಕಾದ್ರೆ ತೆಗೆಸಿ ನೋಡಿ.. ನನ್ನ ಮೇಲಿನ ಆರೋಪ ನಿಜವಾದರೆ ನಾನು ತಲೆಬಾಗುತ್ತೇನೆ ಎಂದು ಖಾರವಾಗಿಯೇ ಮನೇಕಾ ಗಾಂಧಿಯವರಿಗೆ ತಿರುಗೇಟು ನೀಡಿದರು.
ಒಟ್ಟಿನಲ್ಲಿ ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡು, ಅನೇಕ ವಿಚಾರಗಳಲ್ಲಿ ಧನಿಎತ್ತುವ ಸಂಸದೆ ಮನೇಕಾ ಗಾಂಧಿ, ಇಂದೂ ಕೂಡಾ ಧ್ವನಿ ಎತ್ತಿದ್ದಾರೆ. ಮನೇಕಾ ಗಾಂಧಿಯ ಆರೋಪಕ್ಕೆ ಉತ್ತರಿಸಿರುವ ಸಂಸದ ಪ್ರಜ್ವಲ್ ರೇವಣ್ಣ, ತನ್ನ ಮೇಲಿನ ಆರೋಪ ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತೆಗೆಯಬೇಕಿದೆ.
ಸಚಿನ್ ಪವರ್ ಟಿವಿ, ಹಾಸನ