Friday, November 8, 2024

ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ: ಬಿಜೆಪಿಯಿಂದ ಸಾಧನ ಸಮಾವೇಶ ಆಯೋಜನೆ

ಬೆಂಗಳೂರು: ಮುಂದಿನ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸಾಲು ಸಾಲು ಕಾರ್ಯಕ್ರಮ ಮಾಡೋ ಮೂಲಕ ಮತದಾರರ ಮನ ಗೆಲ್ಲಲು ರಣತಂತ್ರ ರೂಪಿಸುತ್ತಿದೆ. ಇನ್ನು ಬಿಜೆಪಿ ಸರ್ಕಾರದ ಮೂರು ಹಾಗೂ ಬೊಮ್ಮಾಯಿ ಸರ್ಕಾರದ ಒಂದು ವರ್ಷ ಮುಕ್ತಾಯದ ಬೆನ್ನಲ್ಲೇ ಬಿಜೆಪಿ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ BJP ಸರ್ಕಾರ ನಾಲ್ಕು ವರ್ಷ ಪೂರೈಸಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಬಾರಿಯೂ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಸಮೀಪ ಬಿಜೆಪಿಯ ಸಾಧನಾ ಸಮಾವೇಶವನ್ನು ಆಯೋಜನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದೇ ತಿಂಗಳು 28ರಂದು ಈ ಸಮಾವೇಶ ಮಾಡೋದಕ್ಕೆ ಸದ್ದಿಲ್ಲದೇ ರೂಪುರೇಷೆ ತಯಾರಾಗುತ್ತಿದೆ. ಈಗಾಗಲೇ ಈ ಬಗ್ಗೆ ಸಚಿವ ಡಾ.ಕೆ ಸುಧಾಕರ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸಭೆ ನಡೆಸಿದ್ದು ಸ್ಥಳ ನಿಗದಿ ಮಾಡಿದ್ದಾರೆ.

ಇನ್ನೂ ಈ ಸಾಧನಾ ಸಮಾವೇಶದಲ್ಲಿ ಕೇವಲ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮಾತ್ರ ಭಾಗಿ ಆಗಲಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆ, ಬಿಬಿಎಂಪಿ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಾಧನಾ ಸಮಾವೇಶ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಈ ಸಾಧನಾ ಸಮಾವೇಶಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜ್ಯ ನಾಯಕರಿಗೆ ಮುಂದಿನ ಚುನಾವಣೆಗೆ ಮಿಷನ್ 150 ಟಾರ್ಗೆಟ್ ನೀಡಿರುವ ಬಿಜೆಪಿ ಹೈಕಮಾಂಡ್, ಈ ಸಮಾವೇಶದ ಮೂಲಕವೇ ಪ್ರಧಾನಿ ಮೋದಿ ಮುಂದಿನ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಇತ್ತೀಚೆಗೆ 40% ಕಮಿಷನ್ ಆರೋಪ, PSI ಹಗರಣ ಸೇರಿದಂತೆ ವಿವಿಧ ಆರೋಪಗಳು ಬಿಜೆಪಿ ಸರ್ಕಾರದ ಮೇಲೆ ಬರುತ್ತಿದ್ದು, ಈ ಎಲ್ಲಾ ಆರೋಪಗಳನ್ನು ಮರೆಮಾಚಲು ಈ ಸಾಧನಾ ಸಮಾವೇಶ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಟೀಕೆ ಮಾಡಲು ಶುರು ಮಾಡಿದ್ದಾರೆ.

ಒಟ್ಟಾರೆ ಆಡಳಿತಾರೂಢ ಬಿಜೆಪಿಗೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯದಲ್ಲಿ ಹಿನ್ನಡೆ ಆಗುತ್ತಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದು, ಈ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ರಾಜ್ಯದ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ರಾಜ್ಯದ ಬಿಜೆಪಿ ನಾಯಕರು ಸಾಲು ಸಾಲು ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದಾರೆ.

ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ

RELATED ARTICLES

Related Articles

TRENDING ARTICLES