ಬೆಂಗಳೂರು : ಬೆಲೆ ಏರಿಕೆ ಸಂಕಷ್ಟದ ಸುಳಿಗೆ ಸಿಲುಕಿರೋ ಜನರಿಗೆ ಮತ್ತೆ ಗಾಯದ ಮೇಲೆ ಬರೆ ಬೀಳಲಿದೆ. ಕೇಂದ್ರ ಸರ್ಕಾರ GST ನೀತಿ ಬದಲಾವಣೆ ತಂದಿದ್ದು ಆಹಾರ ವಸ್ತು ಸೇರಿ ಹಲವು ದಿನ ಬಳಕೆ ವಸ್ತುಗಳ ಬೆಲೆ ಮೇಲೆ ತೆರಿಗೆ ಬರೆ ಬಿದ್ದಿದೆ. ಹೀಗಾಗಿ ಈಗಾಗಲೇ ಕಂಗೆಟ್ಟಿರೋ ಜನರ ಜೇಬಿಗೆ ಇಂದು ಮತ್ತಷ್ಟು ಕತ್ತರಿ ಬಿದ್ದಿದೆ. ಇದ್ರಿಂದ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಈಗಾಗಲೇ ಪೆಟ್ರೋಲ್,ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ, ಹಾಲು, ಹಣ್ಣು, ಹೂ, ತರಕಾರಿ, ಅಕ್ಕಿ, ಬೇಳೆ ಸೇರಿದಂತೆ ದಿನಸಿ ಎಲ್ಲವೂ ತುಟ್ಟಿಯಾಗಿ ಜನರ ಜೀವನ ಮೂರಾಬಟ್ಟೆಯಾಗಿದೆ. ಇಂಥಾ ಪರಿಸ್ಥಿತಿಯಲ್ಲೇ ಕೇಂದ್ರ ಸರ್ಕಾರ ಜನರ ಮೇಲೆ ಮತ್ತಷ್ಟು ಭಾರ ಹೊರಿಸಲು ಹೊರಟಿದೆ. ಸೋಮವಾರದಿಂದಲೇ ಪರಿಷ್ಕೃತ GST ದರ ಜಾರಿಗೆ ಬಂದಿದ್ದು, ಅಗತ್ಯ ವಸ್ತುಗಳ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿದೆ. ಹೊಸ GST ನೂರಕ್ಕೆ ನೂರರಷ್ಟು ಜನರ ಜೇಬು ಸುಡುತ್ತಿದೆ.
ಯಾವುದಕ್ಕೆ ಎಷ್ಟೆಷ್ಟು GST..?
ಪ್ಯಾಕ್ ಮಾಡಿರುವ ಬ್ರ್ಯಾಂಡ್ ಆಹಾರ ಪದಾರ್ಥಗಳು – 5%
ಮೊಸರು, ಲಸ್ಸಿ, ಬೆಣ್ಣೆ, ಹಪ್ಪಳ, ಜೇನುತುಪ್ಪ, ಉಪ್ಪಿನಕಾಯಿ – 5%
ಪನ್ನೀರ್, ಒಣಕಾಳು, ತರಕಾರಿ, ಮಾಂಸ, ಮೀನು – 5%
ಚೆಕ್ಬುಕ್, ಆರ್‌ಬಿಐ, ಐಆರ್‌ಡಿಐ ಸೇವೆಗಳು – 18%
ಸೋಲಾರ್ ವಾಟರ್ ಹೀಟರ್, ಲೆದರ್ ಸಾಮಗ್ರಿ – 5 ರಿಂದ 12%
ಚಾಕು, ಬ್ಲೇಡ್, ಚಮಚ, ಫೋರ್ಕ್ – 12 ರಿಂದ 18%
ಪೆಟ್ರೋಲಿಯಂ, ಕಲ್ಲಿದ್ದಲು, ವೈಜ್ಞಾನಿಕ ಯಂತ್ರಗಳು – 12 ರಿಂದ 18%
ಇಂಕ್, ಮೆಂಡರ್, ಬ್ಲೇಡ್, ಸೌಟು, ಜಾಲರಿ ಸೌಟು – 12 ರಿಂದ 18%
ವಿದ್ಯುತ್ ಚಾಲಿತ ವಾಟರ್ ಪಂಪ್, ಬೈಸಿಕಲ್ ಪಂಪ್ – 12 ರಿಂದ 18%
ಡೈರಿ ಉದ್ಯಮದ ಯಂತ್ರಗಳು, ರುಬ್ಬುವ ಯಂತ್ರ – 12 ರಿಂದ 18%
1,000 ಕ್ಕಿಂತ ಕಡಿಮೆ ಇರೋ ಹೋಟೆಲ್ ರೂಂ – 12%
5,000 ಕ್ಕಿಂತ ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ – 5%
ಹೀಗೆ GST ಏರಿಕೆಯಾಗ್ತಿದ್ದಂತೆ ಗ್ರಾಹಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಎಂಎಫ್ ಹಾಲಿನ ದರದಲ್ಲಿ ಯಾವುದೇ ಬದಲಾವಣೆಯಾಗದಿದ್ರೂ ಮೊಸರು ಹಾಗೂ ಹಾಲಿನ ಇತರೆ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ. ಮೊಸರು 1 ಲೀಟರ್ಗೆ 43 ಇದ್ದದ್ದು 46 ರೂಪಾಯಿಗೆ ಹೆಚ್ಚಾಗಿದೆ. ಅರ್ಧ ಲೀಟರ್ ಮೊಸರು ಇಂದು 22 ರಿಂದ 24ಕ್ಕೆ ಏರಿಕೆಯಾಗಿದೆ. ಮಜ್ಜಿಗೆ 200ML ಹಾಗೂ ಲಸ್ಸಿ ಬೆಲೆ ತಲಾ 1 ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ ಜನರು ಸಂಕಷ್ಟದ ನಡುವೆ ಮತ್ತೊಂದು ಕಷ್ಟ ಎದುರಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ..
ಒಟ್ನಲ್ಲಿ ಬೆಲೆ ಏರಿಕೆಯಿಂದಾಗಿ ಬರಗಾಲದಲ್ಲೇ ಅಧಿಕಮಾಸ ಅನ್ನೋ ಹಾಗಾಗಿದೆ ಜನರ ಪರಿಸ್ಥಿತಿ. ಈಗಾಗಲೇ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ. ಇಂಥಾ ಸಂದರ್ಭದಲ್ಲಿ ಮತ್ತೆ ಗಾಯದ ಮೇಲೆ ಕೇಂದ್ರ ಬರೆ ಎಳೆಯುತ್ತಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಯಾಮರಾ ಮ್ಯಾನ್ ಗಿರೀಶ್ ಜೊತೆ ಮಲ್ಲಾಂಡಹಳ್ಳಿ ಶಶಿಧರ್, ಪವರ್ ಟಿವಿ, ಬೆಂಗಳೂರು