ಶಿವಮೊಗ್ಗ : ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶ ಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಮಳೆಗೆ ಹಲವು ಮನೆಗಳು ಕುಸಿದು ಬೀಳುತ್ತಿವೆ. ಕುಸಿದು ಬಿದ್ದ ಮನೆಗಳಿಗೆ ಸರ್ಕಾರದಿಂದ ಪರಿಹಾರದ ಮೊತ್ತ ಪಡೆಯಲು ಅಡ್ಡ ದಾರಿ ಹಿಡಿದ್ರಾ ಜನರು..? ಹೀಗೊಂದು ಅನುಮಾನ ಕಾಡಲು ತಹಶೀಲ್ದಾರ್ ಅವರು ಬರೆದಿರುವ ಪತ್ರವೇ ಸಾಕ್ಷಿಯಾಗಿದೆ.
ಇನ್ನು, ಮನೆ ಬೀಳದಿದ್ದರೂ, ಪರಿಹಾರದ ಹಣ ಪಡೆಯುವ ಸಲುವಾಗಿ ಜನರೇ ಮನೆಯನ್ನು ಕೆಡವಲು ಮುಂದಾದ್ರಾ..? ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶ ಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಪತ್ರ ಬರೆದಿದ್ದು, ಸೊರಬ ತಹಶೀಲ್ದಾರ್ ಶೋಭಲಕ್ಷ್ಮಿ ಅವರಿಂದ ಕೆಳಹಂತದ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಪತ್ರ ಬರೆದಿದ್ದಾರೆ.
ಅದಲ್ಲದೇ, ಈ ಬಗ್ಗೆ ಪತ್ರದ ಮೂಲಕ ಮೇಲಾಧಿಕಾರಿಗಳ ಗಮನಕ್ಕೂ ತಂದಿರುವ ತಹಶೀಲ್ದಾರ್. ಈ ಹಿಂದೆ ಮಳೆಗೆ ಸಂಪೂರ್ಣ ಮನೆ ಹಾನಿಯಾಗಿದ್ದರೆ 95 ಸಾವಿರ ಪರಿಹಾರ ಇತ್ತು. ಇದೀಗ ಸರ್ಕಾರದ ಪರಿಹಾರದ ಮೊತ್ತವನ್ನು 95 ಸಾವಿರದಿಂದ 5 ಲಕ್ಷಕ್ಕೆ ಏರಿಕೆ ಮಾಡಿದೆ. ಭಾಗಶಃ ಮನೆ ಹಾನಿಯಾಗಿದ್ದರೆ 5,200 ರೂ ಪರಿಹಾರ ಇತ್ತು. 5,200 ಪರಿಹಾರದ ಮೊತ್ತದಿಂದ 50 ಸಾವಿತಕ್ಕೆ ಏರಿಕೆ ಮಾಡಿದೆ. ಹೀಗಾಗಿ ಪರಿಹಾರದ ಮೊತ್ತ ಏರಿಕೆ ಆಗಿದ್ದೆ ಅಡ್ಡ ದಾರಿಗೆ ಕಾರಣವಾಯ್ತಾ….? ಅಥವಾ ಸಾರ್ವಜನಿಕರ ಅಡ್ಡ ದಾರಿ ಹಿಂದೆ ಅಧಿಕಾರಿಗಳ ಕೈವಾಡ ಏನಾದ್ರೂ ಇದೆಯಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.