ಬಳ್ಳಾರಿ: ನಗರ ಹೊಸಪೇಟೆ ಸೇರಿದಂತೆ ಆಂಧ್ರದ ರಾಜಮಂಡ್ರಿಯಲ್ಲಿ ಪರ್ಲ್ಸ್ ವರ್ಲ್ಡ್ ಕಂಪನಿ ಆರಂಭ ಮಾಡಿದ್ದ ದೂಡಂ ರವಿ 400ಕ್ಕೂ ಹೆಚ್ಚು ಠೇವಣಿದಾರರಿಂದ ಲಕ್ಷ ಲಕ್ಷ ಹಣ ಸಂಗ್ರಹಿಸಿ ಕಳೆದ ನಾಲ್ಕು ತಿಂಗಳಿಂದೆ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ. ನಂತರ ಆಂಧ್ರದ ರಾಜಮಂಡ್ರಿಯಲ್ಲಿ ಶರಣಾಗಿದ್ದ ಆರೋಪಿ ದೂಡಂ ರವಿಯನ್ನ ಬಳ್ಳಾರಿಯ ಗಾಂಧಿನಗರ ಠಾಣೆಯ ಪೊಲೀಸರು ಬಳ್ಳಾರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ ದುರಂತವೆಂದ್ರೆ ಇದುವರೆಗೆ ಒಂದು ಪೈಸಾ ಕೂಡ ಆರೋಪಿಯಿಂದ ರಿಕವರಿ ಆಗಿಲ್ಲ. ಆದರೆ ಇತ್ತ ಹಣ ಹೂಡಿಕೆ ಮಾಡಿದ ನೂರಾರು ಜನರು ನಿತ್ಯ ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ.
ಕಡಿಮೆ ಅವಧಿಗೆ ಹೆಚ್ಚಿನ ಲಾಭ ಸಿಗುತ್ತದೆ ಅನ್ನೋ ಕಾರಣಕ್ಕೆ ನೂರಾರು ಜನರು ಪರ್ಲ್ಸ್ ವರ್ಲ್ಡ್ ಕಂಪನಿಗೆ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ನೂರಾರು ಮಹಿಳೆಯರು ಬಡ್ಡಿಗೆ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ರೆ ಇನ್ನೂ ಕೆಲವರು ಬಂಗಾರವನ್ನು ಒತ್ತೆಯಿಟ್ಟು ಹೂಡಿಕೆ ಮಾಡಿದ್ದಾರೆ. ಆದರೆ ಈಗ ಬಡ್ಡಿ ಸಾಲವೂ ಬೆಳೆಯುತ್ತಿದೆ. ಇತ್ತ ಹೂಡಿಕೆ ಮಾಡಿದ ಹಣವೂ ಸಿಗುತ್ತಿಲ್ಲ. ಇದರಿಂದ ಕಂಗಲಾಗಿರುವ ಠೇವಣಿದಾರರು ನಿತ್ಯ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಆದರೆ ಪ್ರತಿದಿನ ಠಾಣೆಗೆ ಬರೋದು ವಾಪಸ್ ಹೋಗೋದು ಆಗಿದೆ.
ಕಳೆದ ನಾಲ್ಕು ತಿಂಗಳಿಂದಲೂ ಠೇವಣಿದಾರರು ಠಾಣೆಗೆ ಅಲೆದಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನ ಮಾಡಿದ್ದಾರೆ. ಬಹುಕೋಟಿ ವಂಚನೆ ಮಾಡಿದ ಆರೋಪಿಯಿಂದ ಬಳ್ಳಾರಿಯ ಗಾಂಧಿನಗರ ಠಾಣೆಯ ಪೊಲೀಸರು ಇದುವರೆಗೆ ಒಂದು ರೂಪಾಯಿಯನ್ನೂ ವಶಪಡಿಸಿಕೊಳ್ಳದಿರುವುದು ದುರಂತವೇ ಸರಿ.