Monday, December 23, 2024

ಜನಾಕ್ರೋಶಕ್ಕೆ ಮಣಿದು ಲಂಕಾ ಅಧ್ಯಕ್ಷ ಗೊಟಬಯ ರಾಜೀನಾಮೆ

ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನ ಜೊತೆಗೆ ರಾಜಕೀಯ ಬಿಕ್ಕಟ್ಟು ಸಹ ಮುಂದುವರೆದಿದೆ. ಜನರ ದಂಗೆಗೆ ಹೆದರಿ ದೇಶವನ್ನು ತೊರೆದು, ಹೆಂಡತಿ ಜೊತೆ ರಾತ್ರೋರಾತ್ರಿ ದೇಶ ಬಿಟ್ಟು ಓಡಿ ಹೋಗಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಲ್ಡೀವ್ಸ್‌ನಿಂದ ಸದ್ಯ ಅವರು ಸಿಂಗಾಪುರದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಸತ್ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ, ಗೊಡಬಯ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಜೊತೆಗೆ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಗೊಟಬಯ ರಾಜಪಕ್ಸ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವಾರದೊಳಗೆ ಚುನಾವಣೆ ನಡೆಯಲಿದೆ. ಬಳಿಕ ಹೊಸ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ. ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಂದಿನ ವಾರದೊಳಗೆ ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸಲು ಶಾಂತಿಯುತ ವಾತಾವರಣಕ್ಕೆ ಸಾರ್ವಜನಿಕರು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗೊಟಬಯ ರಾಜಪಕ್ಸೆ ಅವರು ಸಿಂಗಾಪುರ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆದರೆ ಅದು ಖಾಸಗಿ ಭೇಟಿಯಾಗಿರುತ್ತದೆ. ಅವರು ಯಾವುದೇ ಭದ್ರತೆಯನ್ನು ಕೇಳಿಲ್ಲ, ನಾವು ಕೊಟ್ಟಿಲ್ಲ, ಸಿಂಗಾಪುರದಲ್ಲಿ ಸಾಮಾನ್ಯವಾಗಿ ಯಾವುದೇ ಮನೆ ಭದ್ರತೆಗೆ ಅವಕಾಶವಿಲ್ಲ ಎಂದು ಸಿಂಗಾಪುರ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಸಿಂಗಾಪುರದಲ್ಲಿ ಕೆಲವು ದಿನಗಳ ಕಾಲ ರಾಜಪಕ್ಸೆ ತಂಗಲಿದ್ದಾರೆ ಎಂದು ಶ್ರೀಲಂಕಾ ಭದ್ರತಾ ಮೂಲಗಳು ತಿಳಿಸಿವೆ.

ಗೊಟಬಯ ರಾಜಪಕ್ಸೆ ಆಗಮನದ ನಂತರ ಪ್ರಕಟಣೆ ಹೊರಡಿಸಿರುವ ಸಿಂಗಾಪುರ ಪೊಲೀಸರು, ರಾಜಪಕ್ಸೆ ವಿರುದ್ಧ ಇಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಅಂತ ತಿಳಿಸಿದ್ದಾರೆ. ಜನರು ನಮ್ಮ ಸ್ಥಳೀಯ ಕಾನೂನಿಗೆ ವಿಧೇಯರಾಗಿರಬೇಕು, ಅಕ್ರಮವಾಗಿ ಗುಂಪುಗೂಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES