Sunday, December 22, 2024

ಅಕ್ಟೋಬರ್ 28ಕ್ಕೆ ಸಿನಿಪ್ರಿಯರ ಮುಂದೆ ಗಂಧದಗುಡಿ ಜರ್ನಿ

ಜೇಮ್ಸ್.. ರಾಜರತ್ನ ಅಪ್ಪುವಿನ ಕೊನೆಯ ಸಿನಿಮಾ ಅಲ್ಲ. ಇನ್ನೂ ಎರಡು ಬಾರಿ ಕುಲಕೋಟಿ ಕನ್ನಡಿಗರಿಗೆ ದರ್ಶನ ನೀಡಲಿದ್ದಾರೆ. ಅವ್ರು ಅವರಾಗಿಯೇ ಕಾಣಿಸಿಕೊಂಡ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ ಗಂಧದಗುಡಿಯಿಂದ ಚಂದನವನದಲ್ಲಿ ಕಾಣಸಿಗಲಿದ್ದಾರೆ.

  • ಗಂಧದಗುಡಿ ಪಯಣ.. ವಿಶಿಷ್ಟ ಕಥನ.. ಅಪ್ಪು ಅನ್ವೇಷಣೆ..!
  • ಅವ್ರು ಅವರಾಗಿಯೇ ಕಾಣಿಸಿಕೊಂಡ ದೃಶ್ಯಕಾವ್ಯ ಅನಾವರಣ
  • ಕಾಡು ಮೇಡು ಸುತ್ತಿ ಬಂದ ಬೆಲೆಕಟ್ಟಲಾಗದ ಬೆಟ್ಟದ ಹೂವು..!

ಅಪ್ಪು ಬರೀ ದೊಡ್ಮನೆ ಅಥ್ವಾ ಚಿತ್ರರಂಗದ ಆಸ್ತಿಯಾಗದೆ, ಕರುನಾಡ ಕಣ್ಮಣಿಯಾಗಿ, ಆದರ್ಶಗಳ ವ್ಯಕ್ತಿತ್ವವಾಗಿ ಬೆಳೆದರು. ಅಭಿಮಾನಿ ದೇವರುಗಳ ಪಾಲಿಗೆ ಅಕ್ಷರಶಃ ದೇವತಾ ಮನುಷ್ಯನಾದ್ರು. ಕಾರಣ ಅವ್ರ ನಡೆ, ನುಡಿ, ಆಚಾರ, ವಿಚಾರ ಜೊತೆಗೆ ಮಾಡಿದ ಸಾಮಾಜಿಕ ಕಾರ್ಯಗಳು. ಅದೇನೇ ಇರಲಿ, ವಿಧಿಯ ಆಟಕ್ಕೆ ಅವ್ರು ಇನ್ನಿಲ್ಲವಾಗಿದ್ದು ಮಾತ್ರ ದೇವರಿಗೇ ಹಿಡಿಶಾಪ ಹಾಕುವಂತ ವಿಚಾರ ಅನ್ನೋದು ನಗ್ನಸತ್ಯ.

ಜೇಮ್ಸ್ ಪುನೀತ್ ರಾಜ್​ಕುಮಾರ್ ಅಭಿನಯದ ಕಟ್ಟ ಕಡೆಯ ಸಿನಿಮಾ ಅನ್ನೋದು ಶುದ್ದ ಸುಳ್ಳು. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್, ಅವ್ರ ಗೈರಲ್ಲಿ ರಿಲೀಸ್ ಆಯಿತಾದ್ರೂ ನೂರು ಕೋಟಿ ಬ್ಯುಸಿನೆಸ್ ಮಾಡಿ, ಕನ್ನಡಿಗರ ಅಭಿಮಾನ ಹಾಗೂ ಕಲಾಭಿಮಾನವನ್ನು ಮೆರೆಯುವಂತೆ ಮಾಡಿತು. ಸಾಲಿಡ್ ಸೋಲ್ಜರ್ ಆಗಿ ಅಪ್ಪು ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ರು.

ಇದೀಗ ಲಕ್ಕಿಮ್ಯಾನ್ ಹಾಗೂ ಗಂಧದಗುಡಿ ಅನ್ನೋ ಮತ್ತೆರಡು ಚಿತ್ರಗಳು ರಿಲೀಸ್ ಆಗಲಿವೆ. ಅವುಗಳ ಮುಖೇನ ಮತ್ತೆ ಎರಡೆರಡು ಬಾರಿ ಪುನೀತ್ ರಾಜ್​ಕುಮಾರ್ ಅಭಿಮಾನಿ ದೇವರುಗಳಿಗೆ ದರ್ಶನ ನೀಡಲಿದ್ದಾರೆ. ಸದ್ಯ ಈ ಪೈಕಿ ಗಂಧದಗುಡಿ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕಾರಣ ಇದು ಅವ್ರ ಡ್ರೀಮ್ ಪ್ರಾಜೆಕ್ಟ್. ಡಾಕ್ಯುಮೆಂಟರಿ ಆಡಲು ಹೊರಟ ಅವ್ರ ಅನ್ವೇಷಣೆಯ ಪಯಣ.

ನಮ್ಮ ಕರುನಾಡಿನ ದಟ್ಟ ಕಾಡು, ಬೆಟ್ಟ ಗುಡ್ಡ, ವನ್ಯ ಜೀವಿಯ ಸಂಪತ್ತು ಎಷ್ಟು ಸಮೃದ್ಧ ಹಾಗೂ ಸೊಬಗು ಅನ್ನೋದನ್ನ ತೋರಿಸಲು ಹೊರಟ ಅವ್ರ ಆಶಯ. ಆ ಕನಸಿಗೆ ರೆಕ್ಕೆ ಕಟ್ಟಿ ಹಾರುವಂತೆ ಮಾಡ್ತಿರೋದು ಅವ್ರ ಧರ್ಮಪತ್ನಿ ಶರೀಮತಿ ಅಶ್ವಿನಿ ಪುನೀತ್ ರಾಜ್​ಕುಮಾರ್. ಹೌದು.. ಅಶ್ವಿನಿ ಅವ್ರು ಅದನ್ನ ಸಿನಿಮಾ ಆಗಿಸಲು ಮುಂದಾಗಿದ್ದು, ಟೀಸರ್ ರಿಲೀಸ್​ನಿಂದ ಎಲ್ಲರ ಗಮನ ಸೆಳೆದಿದ್ರು. ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿ ಸಂಚಲನ ಮೂಡಿಸಿದ್ದಾರೆ.

ರಾಜ್ಯೋತ್ಸವ ಮಾಸವಾದ ನವೆಂಬರ್​ನಲ್ಲಿ ಗಂಧದಗುಡಿ ಚಿತ್ರ ರಿಲೀಸ್ ಆಗಬೇಕಿತ್ತು. ಆದ್ರೀಗ ಅದಕ್ಕೂ ಮುನ್ನ ಅಂದ್ರೆ ಅಕ್ಟೋಬರ್ 28ರಂದೇ ರಿಲೀಸ್ ಮಾಡಲು ಮನಸ್ಸು ಮಾಡಿದ್ದಾರೆ. ಅಂದಹಾಗೆ ಅಕ್ಟೋಬರ್ 29ಕ್ಕೆ ಅಪ್ಪು ಅಗಲಿ ಒಂದು ವರ್ಷವಾಗಲಿದೆ. ಹಾಗಾಗಿ ಅದಕ್ಕೂ ಒಂದು ದಿನ ಮೊದಲು ಅಂದ್ರೆ ಅಕ್ಟೋಬರ್ 28ಕ್ಕೆ ರಿಲೀಸ್ ಮಾಡಿ ಅವ್ರ ಪುಣ್ಯಸ್ಮರಣೆಗೆ ಟ್ರಿಬ್ಯೂಟ್ ನೀಡಲು ಮುಂದಾಗಿದ್ದಾರೆ.

ಗಂಧದಗುಡಿಯ ನಂದಾದೀಪ ಅಪ್ಪು

‘ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ.’                                                                                                                            – ಅಶ್ವಿನಿ ಪುನೀತ್ ರಾಜ್​ಕುಮಾರ್

ಹೀಗಂತ ಸ್ವತಃ ಅಶ್ವಿನಿ ಅವ್ರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ರಿಲೀಸ್ ಡೇಟ್​ನ ಅನೌನ್ಸ್ ಮಾಡಿದ್ದಾರೆ. ಇದನ್ನ ಪಿಆರ್​ಕೆ ಬ್ಯಾನರ್​ನಡಿ ಅಶ್ವಿನಿ ಅವ್ರು ನಿರ್ಮಿಸಿದ್ದು, ಅಮೋಘವರ್ಷ ಇದನ್ನ ನಿರ್ದೇಶಿಸೋದ್ರ ಜೊತೆ ಅಪ್ಪು ಜೊತೆ ಲೀಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಲಕ್ಕಿಮ್ಯಾನ್ ಚಿತ್ರದಲ್ಲಿ ದೇವರ ಮಗ ದೇವರಾಗಿ ದರ್ಶನ ಕೊಡೋಕೂ ಮುನ್ನ ಗಂಧದಗುಡಿಯಲ್ಲಿ ಮಿಂದೇಳೋ ದೃಶ್ಯ ಚಿತ್ತಾರ ಬೆಳ್ಳಿಪರದೆ ಬೆಳಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES