Thursday, November 21, 2024

ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3.5/5

ಸಿದ್ಲಿಂಗು, ನೀರ್​ದೋಸೆ ನಂತ್ರ ಪೆಟ್ರೋಮ್ಯಾಕ್ಸ್​ನಿಂದ ಹ್ಯಾಟ್ರಿಕ್ ಹಿಟ್ ಹೊಡೆದಿದ್ದಾರೆ ನಿರ್ದೇಶಕ ವಿಜಯ್​ಪ್ರಸಾದ್. ಅದ್ರಲ್ಲೂ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಮನೆ, ಮನಸು, ಸಂಬಂಧಗಳ ಚಿಂತನ ಮಂಥನ ಮಾಡಿಸಿದ್ದಾರೆ. ಇಷ್ಟಕ್ಕೂ ಚೇಷ್ಟೆ ಎಷ್ಟಿದೆ..? ಎಮೋಷನ್ಸ್ ಏನಿದೆ ಅನ್ನೋದ್ರ ಜೊತೆ ಪವರ್ ಟಿವಿ ರೇಟಿಂಗ್ ಸಮೇತ ಡಿಟೈಲ್ಡ್ ರಿಪೋರ್ಟ್​ ನಿಮ್ಮ ಮುಂದೆ.

ಚಿತ್ರ: ಪೆಟ್ರೋಮ್ಯಾಕ್ಸ್

ನಿರ್ದೇಶನ: ಎಂ.ಸಿ. ವಿಜಯ್​ಪ್ರಸಾದ್

ನಿರ್ಮಾಣ: ಕೆಎಂ ಸುಧೀರ್

ಸಂಗೀತ: ಅನೂಪ್ ಸೀಳಿನ್

ಕ್ಯಾಮೆರಾ ಕಣ್ಣು: ನಿರಂಜನ್ ಬಾಬು

ತಾರಾಗಣ: ನೀನಾಸಂ ಸತೀಶ್, ನಾಗಭೂಷಣ್, ಹರಿಪ್ರಿಯಾ, ಅರುಣ್, ಕಾರುಣ್ಯಾ ರಾಮ್, ವಿಜಯ ಲಕ್ಷ್ಮೀ ಸಿಂಗ್, ಅಚ್ಯುತ್, ಅಶ್ವಿನ್ ಹಾಸನ್ ಮುಂತಾದವರು.

ಪೆಟ್ರೋಮ್ಯಾಕ್ಸ್ ಕಥಾಹಂದರ :

ಪೆಟ್ರೋಮ್ಯಾಕ್ಸ್ ಬೆಳಕು ಹರಿಯೋಕೂ ಮುನ್ನ ಕಗ್ಗತ್ತಲ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ನಾಲ್ಕು ಅನಾಥರ ಕುರಿತ ಸಿನಿಮಾ ಇದು. ಇವ್ರು ಅನಾಥಾಶ್ರಮದಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿ, ಕೊನೆಗೆ ಕುಟುಂಬವಾಗ್ತಾರೆ. ಆದ್ರೆ ಬದುಕು ಕಟ್ಟಿಕೊಳ್ಳಲು ಹೊರಬಂದು, ಅವ್ರಿಗೆ ಅಂತ ಒಂದು ಮನೆ ಹುಡುಕಾಟ ಮಾಡಿದಾಗ ಏನೆಲ್ಲಾ ಕಷ್ಟಗಳು ಎದುರಾಗುತ್ತೆ ಅನ್ನೋದು ಚಿತ್ರದ ಮೊದಲಾರ್ಧ. ಆದ್ರೆ ದ್ವಿತಿಯಾರ್ಧ ಬೇರೆಯದ್ದೇ ಟ್ವಿಸ್ಟ್ ಕೊಡುತ್ತೆ. ಪುನೀತ್​ರ ರಾಜಕುಮಾರ ಸಿನಿಮಾದ ರೀತಿ ನೋಡುಗರನ್ನ ಎಮೋಷನಲಿ ಕಟ್ಟಿ ಹಾಕುತ್ತೆ. ಮನೆ ಇಲ್ಲದೆ ಮನೆಗಾಗಿ ಪರಿತಪಿಸೋರು ನಿಜವಾದ ಅನಾಥರಲ್ಲ. ಇರೋ ಮನೆಯನ್ನ ಮಾರಿ, ಅಮ್ಮನನ್ನ ವೃದ್ಧಾಶ್ರಮಕ್ಕೆ ಬಿಟ್ಟು ಪತ್ನಿ ಜೊತೆ ಲಕ್ನೋ ಸೇರಿಕೊಳ್ಳೋ ಮಗ ನಿಜಕ್ಕೂ ಅನಾಥ ಅನ್ನೋದನ್ನ ದ್ವಿತಿಯಾರ್ಧ ಹೇಳುತ್ತೆ. ಅದ್ಹೇಗೆ ಅನ್ನೋದನ್ನ ನೀವು ಥಿಯೇಟರ್​ನಲ್ಲೇ ನೋಡಬೇಕು.

ಪೆಟ್ರೋಮ್ಯಾಕ್ಸ್ ಆರ್ಟಿಸ್ಟ್ ಪರ್ಫಾಮೆನ್ಸ್ :

ಫುಡ್ ಡೆಲಿವರಿ ಬಾಯ್ ಆಗಿ ನೀನಾಸಂ ಸತೀಶ್ ಅಭಿನಯದಲ್ಲಿ ಚತುರ ಅನ್ನೋದನ್ನ ನೆನಪಿಸೋ ರೇಂಜ್​ಗೆ ಎಲ್ಲರನ್ನ ಕಾಡುತ್ತಾರೆ. ಊದುಬತ್ತಿ ಶಿವಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳೋ ನಾಯಕ ಸತೀಶ್ ಜೊತೆ ಸಲೂನ್​ನಲ್ಲಿ ಕೆಲಸ ಮಾಡೋ ಕವಿತಾ ಕೃಷ್ಣಮೂರ್ತಿಯಾಗಿ ಕಾರುಣ್ಯ ರಾಮ್, ಕೃಷ್ಣಮೂರ್ತಿಯಾಗಿ ನಾಗಭೂಷಣ್, ಅಗರ್​ಬತ್ತಿ ಮಾದಪ್ಪನಾಗಿ ಅರುಣ್ ಹಾಗೂ ರಿಯಲ್ ಎಸ್ಟೇಟ್ ಮೀನಾಕ್ಷಿಯಾಗಿ ಹರಿಪ್ರಿಯಾ ಸಾಥ್ ನೀಡಿದ್ದಾರೆ. ಇವರೇ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇವ್ರು ಚೇಷ್ಟೆಯ ಮಾತುಗಳಿಂದಲೇ ಪಡ್ಡೆ ಹುಡ್ಗರ ನಿದ್ದೆ ಕೆಡಿಸುತ್ತಾರೆ.

ಕಾರುಣ್ಯಾ ರಾಮ್ ಹಾಗೂ ಹರಿಪ್ರಿಯಾ ಬೋಲ್ಡ್​ ಌಕ್ಟಿಂಗ್ ಹಾಗೂ ಡೈಲಾಗ್ ಡೆಲಿವರಿಗೆ ಸಲಾಂ ಹೇಳಲೇಬೇಕು. ಅಷ್ಟರ ಮಟ್ಟಿಗೆ ಮಡಿ ಮೈಲಿಗೆ ಬಿಟ್ಟು, ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇನ್ನು ಸುಧಾಮೂರ್ತಿ ಪಾತ್ರದಲ್ಲಿ ವಿಜಯ್ ಲಕ್ಷ್ಮೀ ಸಿಂಗ್ ಹಾಗೂ ಅವ್ರ ಮಗನ ಪಾತ್ರದಲ್ಲಿ ಅಶ್ವಿನ್ ಹಾಸನ್ ಗಮನ ಸೆಳೆಯುತ್ತಾರೆ.

ಪೆಟ್ರೋಮ್ಯಾಕ್ಸ್ ಪ್ಲಸ್ ಪಾಯಿಂಟ್ಸ್ :

ಕಲಾವಿದರ ಅಭಿನಯ

ಹಾಸ್ಯ

ಎಮೋಷನಲ್ ಕಂಟೆಂಟ್

ಅಶ್ಲೀಲತೆಗೆ ನಿರ್ದೇಶಕರ ವ್ಯಾಖ್ಯಾನ

ಪೆಟ್ರೋಮ್ಯಾಕ್ಸ್ ಮೈನಸ್ ಪಾಯಿಂಟ್ಸ್ :

ಮೊದಲಾರ್ಧದಲ್ಲಿರೋ ಅಶ್ಲೀಲ ಸಂಭಾಷಣೆ

ಮಕ್ಕಳು ಹಾಗೂ ಫ್ಯಾಮಿಲಿ ಆಡಿಯೆನ್ಸ್​ಗೆ ಮುಜುಗರ

ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3.5/5

ಪೆಟ್ರೋಮ್ಯಾಕ್ಸ್ ಫೈನಲ್ ಸ್ಟೇಟ್​ಮೆಂಟ್ :

ವಿಜಯ್​ಪ್ರಸಾದ್​ರ ಸಿನಿಮಾಗಳು ಇತರೇ ನಿರ್ದೇಶಕರಿಗಿಂತ ಭಿನ್ನ ಅನ್ನೋದು ಇಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ. ಆದ್ರೆ ಯೂತ್ಸ್​​ನ ಅಟ್ರ್ಯಾಕ್ಟ್ ಮಾಡೋಕೆ ಹೋಗಿ ಇಲ್ಲಿ ಚೇಷ್ಟೆಯ ಪರಾಕಾಷ್ಟೆ ಮೆರೆದಿರೋ ನಿರ್ದೇಶಕರು, ದ್ವಿತಿಯಾರ್ಧದಲ್ಲಿರೋ ಅಸಲಿ ಕಂಟೆಂಟ್​ನ ಸಮಾಜಕ್ಕೆ ಕನ್ವೇ ಮಾಡೋದ್ರಲ್ಲಿ ಎಡವಿದ್ದಾರೆ. ಅರ್ಥಾತ್ ಫ್ಯಾಮಿಲಿ ಆಡಿಯೆನ್ಸ್ ಥಿಯೇಟರ್​ಗೆ ಕರೆತರೋಕೆ ಕೊಂಚ ಯೋಚಿಸುವಂತಹ ಸಂಭಾಷಣೆಯನ್ನ ಅಳವಡಿಸಿದ್ದಾರೆ. ಇದ್ರ ಹೊರತಾಗಿ ಇದೊಂದು ಪಕ್ಕಾ ಮೆಸೇಜ್ ಓರಿಯೆಂಟೆಡ್ ಮೂವಿ. ಮನೆಯಲ್ಲಿ ಮಕ್ಕಳು ಹಾಗೂ ಪೋಷಕರ ನಡುವಿನ ಸಂಬಂಧಗಳು ಹೇಗಿರಬೇಕು..? ಹೇಗಿರಬಾರದು ಅನ್ನೋದನ್ನ ಪರಾಮರ್ಶಿಸಿಕೊಳ್ಳೋ ರೇಂಜ್​ಗೆ ನೋಡುಗರನ್ನ ಕಾಡಲಿದೆ ಪೆಟ್ರೋಮ್ಯಾಕ್ಸ್. ಅದೇನೇ ಇರಲಿ, ಡಬಲ್ ಮೀನಿಂಗ್ ಡೈಲಾಗ್ಸ್ ಇವೆ ಅನ್ನೋದನ್ನ ಬಿಟ್ಟು ನೋಡೋದಾದ್ರೆ ಒಂದೊಳ್ಳೆ ಮೆಸೇಜ್ ಜೊತೆ ಕಣ್ಣೀರು ಹಾಕ್ತಾ ಥಿಯೇಟರ್​ನಿಂದ ಹೊರಬರ್ತೀರಾ. ನಮ್ಮ ಮನಸ್ಸು ಸ್ವಚ್ಚವಾಗಿದ್ರೆ ಅಂಧಕಾರದಲ್ಲಿದ್ರೂ ದಿಕ್ಕು ಕಾಣಲಿದೆ, ಗುರಿ ಮುಟ್ಟುತ್ತೇವೆ, ದೇವರು ಕೈಹಿಡಿಯುತ್ತಾರೆ ಅನ್ನೋ ಬೆಳಕಿನ ಕಥೆ ಇದಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES