Monday, December 23, 2024

‘ಬೆಂಕಿ’ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3/5

ಅಣ್ಣ ತಂಗಿ, ತವರಿಗೆ ಬಾ ತಂಗಿ ಸಿನಿಮಾ ನೋಡಿ ಶಹಬ್ಬಾಸ್​ ಅಂದಿದ್ದ ಪ್ರೇಕ್ಷಕ, ಬೆಂಕಿ ಸಿನಿಮಾದ ಅಣ್ಣ-ತಂಗಿ ಕಾಂಬಿನೇಷನ್​ಗೆ ಕ್ಲೀನ್​ಬೋಲ್ಡ್​​ ಆಗಿದ್ದಾನೆ. ಮತ್ತೊಮ್ಮೆ ಶಿವಣ್ಣ- ರಾಧಿಕಾ ಪೇರ್​​ ನೆನಪಾಗುವಂತೆ ಮಾಡಿದೆ ಬೆಂಕಿ ಸಿನಿಮಾ. ಪ್ರೇಕ್ಷಕ ನೆಚ್ಚಿನ ತಂಗಿ ನೆನೆದು ಭಾವುಕನಾಗಿದ್ದಾನೆ. ಯೆಸ್​​.  ಅನೀಶ್​ ಅಭಿನಯದ ಹಳ್ಳಿಯ ಅಣ್ಣ ತಂಗಿ ಕಥೆಗೆ ಪ್ರೇಕ್ಷಕರು ಎನಂತಾರೆ. ಕಥೆಯ ಆಳ, ಅಂತರಾಳ ಏನು ಅನ್ನೋದನ್ನ ಡೀಟೈಲ್​ ಆಗಿ ಹೇಳ್ತೀವಿ.

‘ಬೆಂಕಿ’ಯಂಥ ಅಣ್ಣನಾಗಿ ಅಕಿರ ಅನೀಶ್ ಮಾಸ್ ಎಂಟ್ರಿ..!

120ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬೆಂಕಿಯ ಜ್ವಾಲೆ ಜೋರು

ವಾಸು ನಾನು ಪಕ್ಕಾ ಕಮರ್ಷಿಯಲ್​​ ಅಂತಾ ಪಕ್ಕಾ ಮಾಸ್​ ಅಂಡ್​ ಮಾಸ್​ ಸಿನಿಮಾಗಳನ್ನು ಕೊಟ್ಟಿದ್ದ ಅನೀಶ್​ ಮೊದಲ ಬಾರಿಗೆ ಹಳ್ಳಿ ಹೈದನಾಗಿ ಬಣ್ಣ ಹಚ್ಚೋ ಪ್ರಯತ್ನ ಪಟ್ಟಿದ್ರು. ರಾಮಾರ್ಜುನ ಸಿನಿಮಾ ನಂತ್ರ, ಸಖತ್​ ಚ್ಯುಸಿಯಾಗಿದ್ದ ಅನೀಶ್​ ಕಥೆ ಕೇಳಿದ ತಕ್ಷಣ ಮುಲಾಜಿಲ್ಲದೇ ಓಕೆ ಮಾಡಿದ್ರು. ಯೆಸ್​​.. ಈ ಪಾಟಿ ಇಂಪ್ರೆಸ್​ ಆಗಿದ್ದ ಕಥೆಗೆ ಓಕೆ ಹೇಳಿದ್ದನ್ನು ಕೇಳೆ ಸಿನಿಪ್ರಿಯರು ಸಿನಿಮಾ ನೋಡೋ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಬೆಂಕಿ ಚಿತ್ರತಂಡದ ಪರಿಶ್ರಮಕ್ಕೆ ಫಲ ಸಿಕ್ಕಿದೆ.

ಇಂದಿನ ಯುವಕರ ಹೃದಯ ಗೆಲ್ಲೋ ಸಿನಿಮಾಗಳಲ್ಲಿ ಬಹುತೇಕ ಹೊಡೆದಾಟ, ಲಾಂಗು, ಮಚ್ಚು, ಕತ್ತಿಗಳು ಜಳಪಿಸಿದ್ರೆ ಆ ಸಿನಿಮಾ ಸೂಪರ್​ ಹಿಟ್​ ಅನ್ನೋ ಕಾಲ ಇದು. ದೊಡ್ಡಮ್ಮನ ಸಪ್ಪಳವಿಲ್ಲ, ಪ್ರೀತಿ, ಪ್ರೇಮದ ಅಬ್ಬರವಿಲ್ಲ. ಪಕ್ಕಾ ಅಣ್ಣ ತಂಗಿ ಎಮೋಷನ್​ ಮೇಲೆ ಟ್ರಾವೆಲ್ ಆಗೋ ಸುಂದರ ಹಳ್ಳಿ ಸೊಗಡಿನ ಸಿನಿಮಾ ಬೆಂಕಿ. ಅಂತೂ ಬೆಂಕಿ ಚಿತ್ರಕ್ಕೆ ಪ್ರೇಕ್ಷಕರು ಓಕೆ ಎಂದಿದ್ದಾರೆ.

ಚಿತ್ರ:  ಬೆಂಕಿ

ನಿರ್ದೇಶನ: ಎ.ಆರ್​​. ಶಾನ್​​​

ನಿರ್ಮಾಣ: ಕೆ.ವಿ ರವಿಕುಮಾರ್​​, ಶ್ರೀಕಾಂತ್​ ಪಿ, ನಂದೀಶ್​​​​​

ಸಂಗೀತ: ಆನಂದ್​ ರಾಜಾ ವಿಕ್ರಮ್​​

ಸಿನಿಮಾಟೋಗ್ರಫಿ: ವೀನಸ್​ ನಾಗರಾಜ್​ ಮೂರ್ತಿ

ತಾರಾಗಣ :ಅನೀಶ್​​​, ಸಂಪದ ಹುಲಿವಾನ್, ಶ್ರುತಿ ಪಾಟೀಲ್​​, ಚಂದ್ರಕೀರ್ತಿ, ಅಚ್ಯುತ್​​ ಕುಮಾರ್​​​, ಸಂಪತ್​​​​​ ಕುಮಾರ್, ಉಗ್ರಂ ಮಂಜು ಮುಂತಾದವರು.

ಬೆಂಕಿ ಸ್ಟೋರಿಲೈನ್​​ :

ಪುಟ್ಟ ಹಳ್ಳಿ. ಸುತ್ತ ಹಸಿರ ಛಾಯೆ.ಅಲ್ಲೊಬ್ಬ ಬೆಂಕಿಯಂತಿರೋ ಹುಡುಗ ಬೆಂಕಿ​​. ಹೆಸರಿಗೆ ತಕ್ಕಂತೆ ಎಲ್ಲರಿಗೂ ಅವನ ಶಾಖ ತಟ್ಟೋದಿಲ್ಲ. ಅವನಿಗೆ ಯಾರು ಎದುರಾಗ್ತಾರೋ ಅವರ ಸೊಂಟ ಮುರಿಯೋ ಜವಾರಿ ಹುಡುಗ ಬೆಂಕಿ. ಇನ್ನೂ ಅನೀಶ್​​ಗೆ ತಂಗಿಯಾಗಿ ಶೃತಿ ಪಾಟೀಲ್​​ ಓದಿನಲ್ಲಿ ಹಿಂದೆ, ಅಣ್ಣನ ಮುದ್ದಿನಲ್ಲಿ ಮುಂದೆ. ಅಣ್ಣ ತಂಗಿ ಎರಡು ದೇಹ, ಒಂದೇ ಜೀವ. ಆರಂಭದಲ್ಲಿ ಮುದ್ದು ಗುಮ್ಮನ ಪ್ರೀತಿಯ ಸೆಳೆತ ಕೊಂಚ ಮಜಾ ಕೊಟ್ಟರೆ, ಇನ್ನೆಲ್ಲಾ ಅಣ್ಣ ತಂಗಿಯ ಮಧುರ ಭಾಂಧ್ಯವ್ಯವನ್ನು ಪ್ರೀತಿಯ ಜೋಕಾಲಿಯಲ್ಲಿ ತೂಗಾಡಿಸುತ್ತೆ. ಇದ್ರ ಮದ್ಯೆ ಊರಲ್ಲೊಬ್ಬ ಖಳನಾಯಕ. ಜೈಲಿಗೆ ಹೋಗಿ ಬಂದಿದ್ರು ಬೆಂಕಿ ತಂಗಿಯ ಮೇಲೆ ಅವನ ಕೆಂಗಣ್ಣು. ತಂಗಿಯ ಮದ್ವೆಯನ್ನು ಇಡೀ ಊರೆ ನಿಂತು ನೋಡುವಂತೆ ಸಡಗರದಿಂದ ಮಾಡಲು ತಯಾರಿ ನಡೀತಿದ್ದಂತೆ, ವಿಷ ಕುಡಿದು ತಂಗಿ ಸಾವನ್ನಪ್ಪುತ್ತಾಳೆ. ಈ ಕೊಲೆಯ ಸುತ್ತಾ ಸೆಕೆಂಡ್​ ಆಫ್​​ ಟ್ರಾವೆಲ್​ ಆಗಲಿದೆ. ಅಪರಾಧಿಯನ್ನು ಪತ್ತೆ ಮಾಡೋದೆ ಈ ಸಿನಿಮಾದ ಸಸ್ಪೆನ್ಸ್​ ಥ್ರಿಲ್ಲರ್​ ಮಿಸ್ಟರಿ.

ಬೆಂಕಿ ಚಿತ್ರದ  ಆರ್ಟಿಸ್ಟ್ ಪರ್ಫಾಮೆನ್ಸ್ :

ಅಣ್ಣ ತಂಗಿಯ ಎಮೋಷನಲ್​​ ಜರ್ನಿಯನ್ನು ಎಲ್ಲರ ಹೃದಯ ಮುಟ್ಟುವ ಹಾಗೆ ತೋರಿಸಿ ಸಕ್ಸಸ್​ ಆಗ್ಬೇಕಾದ್ರೆ ನಿರ್ಮಾಪಕ, ಹಾಗೂ ನಿರ್ದೇಶಕರಿಗೆ ಎಂಟೆದೆಯ ಗುಂಡಿಗೆ ಬೇಕು. ಗಟ್ಟಿ ಕಥೆ ಇರಬೇಕು, ಎಲ್ಲರೂ ಇಂಪ್ರೆಸ್​ ಆಗುವ ರೀತಿ ಅಭಿನಯದ ಮೂಲಕ ಪ್ರೇಕ್ಷಕರನ್ನು ಗೆಲ್ಲಬೇಕು. ಆ ವಿಚಾರದಲ್ಲಿ ಅನೀಶ್​, ಅಣ್ಣನಾಗಿ ಗೆದ್ದಿದ್ದಾರೆ. ಇನ್ನೂ ತಂಗಿ ರೋಲ್​ನಲ್ಲಿ ಶೃತಿ ಪಾಟೀಲ್​ ತುಂಟತನದರ ರೋಲ್​​​​ನಲ್ಲೂ ಸೈ. ಕಣ್ಣೀರಾಕಿಸೋಕೂ ಜೈ.

ಫ್ರಾಂಕ್​​ ಮಾಡೋ ಗಟಪ್​​ನಲ್ಲಿ ಎಂಟ್ರಿ ಕೊಟ್ಟು ಪರ್ಮನೆಂಟ್​ ಬೆಂಕಿ ಬಾಳಿನಲ್ಲೆ ಸೆಲೆಯಾಗೋ ನಾಯಕಿ ಸಂಪದ ಕೂಡ ಮುದ್ದು ಮುದ್ದಾಗಿ ಅಭಿನಯಿಸಿದ್ದಾರೆ. ಹಾಡುಗಳು ಕೂಡ ಕೇಳಲು ಮಜಬೂತಾಗಿವೆ. ಆಕ್ಷನ್​​​, ಎಮೋಷನ್​, ಲವ್​​​​ಗಳನ್ನು ಹದವಾಗಿ ಕಲಸಿಟ್ಟ ರುಚಿಯಾದ ಹೂರಣ ಬೆಂಕಿ ಸಿನಿಮಾ.

ಇದ್ರ ಜತೆಯಲ್ಲಿ ಪೊಲೀಸ್​ ಅಧಿಕಾರಿ ರೋಲ್​ನಲ್ಲಿ ವರ್ಸಟೈಲ್​ ನಟ ಅಚ್ಯುತ್​ ಕುಮಾರ್​ ಮಿಂಚಿದ್ರೆ, ವಿಲನ್​ ರೋಲ್​​ನಲ್ಲಿ ಉಗ್ರಂ ಮಂಜು ಖಡಕ್​ ಆಗಿ ಕಾಣುತ್ತಾರೆ. ತೂತು ಮಡಿಕೆ ಸಿನಿಮಾ ಮೂಲಕ ಸದ್ದು ಮಾಡಿದ್ದ ಚಂದ್ರಕೀರ್ತಿಗೆ ಈ ಸಿನಿಮಾ ಸಖತ್​ ಸ್ಪೆಷಲ್​ ಆಗಿದೆ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಅವರ ಪಾತ್ರ ಮೂಡಿ ಬಂದಿದೆ.

ಬೆಂಕಿ ಪ್ಲಸ್ ಪಾಯಿಂಟ್ಸ್ :

ಅಣ್ಣ ತಂಗಿ ಭಾವುಕ ಸನ್ನಿವೇಶ

ಥ್ರಿಲ್ಲಿಂಗ್​ ಎಲಿಮೆಂಟ್​​

ಅನಿರೀಕ್ಷಿತ ಕ್ಲೈಮ್ಯಾಕ್ಸ್​

ಹಳ್ಳಿಗಾಡಿನ ಸುಂದರ ಕಥೆ

ಸಾಮಾಜಿಕ ಸಂದೇಶ

ಮೌಲ್ಯಗಳ ಅನಾವರಣ

ಬೆಂಕಿ ಮೈನಸ್ ಪಾಯಿಂಟ್ಸ್ :

ಅನೀಶ್​ ರಾಮಾರ್ಜುನ ಸಿನಿಮಾ ನಂತ್ರ ಅಣ್ಣ ತಂಗಿಯ ಸಂಬಂಧಗಳನ್ನು ಇಂದಿನ ಯುವ ಪೀಳಿಗೆಗೆ ಅರ್ಥಮಾಡಿಸೋಕೆ ಹೋಗಿದ್ದಾರೆ. ಆದ್ರೇ ಸಿನಿಮಾ ಫಸ್ಟ್​ ಆಫ್​​ನಲ್ಲಿ ಕೊಟ್ಟ ಕಿಕ್ಕು, ಸೆಕೆಂಡ್​ ಆಫ್​ಗೆ ಸ್ಲೋ ಅನ್ನಿಸುತ್ತದೆ. ಕೆಲವು ಕಡೆ ಕಾಮಿಡಿ ಕಚಗುಳಿ ನಕ್ಕು ನಗಿಸಿದರೂ, ತುಂಬಾ ಸಲ ಒತ್ತಾಯದ ಲೇಪನ ಅನಿಸದೇ ಇರದು. ಸಣ್ಣ ಪುಟ್ಟ ಮಿಸ್ಟೇಕ್​​​​​ ಹೊರತು ಪಡಿಸಿದ್ರೆ, ಬೆಂಕಿ ಸಿನಿಮಾ ಫ್ಯಾಮಿಲಿ ಒಟ್ಟಿಗೆ ಕೂತು ನೋಡಬಹುದಾದ ಸಿನಿಮಾ.

ಬೆಂಕಿಗೆ ಪವರ್ ಟಿವಿ ರೇಟಿಂಗ್: 3/5

ಬೆಂಕಿ ಫೈನಲ್ ಸ್ಟೇಟ್​ಮೆಂಟ್:

ಈ ಸಿನಿಮಾ ಕೇವಲ ತಂಗಿಯ ಮೇಲಿನ ಅತಿಯಾದ ಪ್ರೇಮವನ್ನು, ವಿಪರೀತ ಎನ್ನುವಂತೆ ತೋರಿಸಿದ್ದಾರೆ ಎಂದುಕೊಳ್ಳಬೇಡಿ. ಇದ್ರ ಜತೆಗೆ ಇಂದಿನ ಕೆಟ್ಟ ಮನಸ್ಥಿತಿಯ ಹೊಂದಿರುವ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇಷ್ಟೆ ಅಲ್ಲದೆ, ತಂಗಿಯನ್ನು ಗಂಡನ ಮನೆಗೆ ಕಳಿಸುವ ಮುನ್ನ ಹೇಗೆಲ್ಲಾ ಅಳೆದು ತೂಗಬೇಕು ಅನ್ನೋ ಸುಂದರ ಸಂದೇಶ ಇರೋ ಸಿನಿಮಾ ಬೆಂಕಿ. ಎಲ್ಲೂ ಬೋರ್​ ಹೊಡೆಸದೆ, ಕೊನೆಯವರೆಗೂ ನೋಡಿಸಿಕೊಂಡು ಹೋಗುವ ಸಿನಿಮಾ ಬೆಂಕಿ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES